ಶಬರಿಮಲೆ : ಅಯ್ಯಪ್ಪ ದೇವಸ್ಥಾನದಲ್ಲಿ ಯಾತ್ರಿಕರಿಗೆ ವಿತರಿಸಲು ಸಿದ್ಧಪಡಿಸಲಾಗಿದ್ದ 1.60 ಲಕ್ಷ ಅರವಣ ಡಬ್ಬಿಗಳು ತೇವಾಂಶ ಕಳೆದುಕೊಂಡ ಪರಿಣಾಮ ಕಲ್ಲಿನಂತೆ ಗಟ್ಟಿಯಾಗಿ ಮಾರ್ಪಟ್ಟಿದ್ದು, ಇದರಿಂದ ದೇವಸ್ವಂ ಮಂಡಳಿಗೆ ಸುಮಾರು ₹1.60 ಕೋಟಿ ರೂ. ನಷ್ಟ ಉಂಟಾಗಿದೆ. ಬೆಲ್ಲದ ಹೆಚ್ಚಿನ ಸಿಹಿ ಅಂಶವೇ ತೇವಾಂಶ ನಷ್ಟಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ.

ಮಂಡಲಕಲಾ ಯಾತ್ರೆಗೆ ಮುನ್ನ ಮೀಸಲು ರೂಪದಲ್ಲಿ ತಯಾರಿಸಲಾದ ಈ ಅರವಣ ಮಹಸರವನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಬೇಕಾದ ಕಾರಣ, ಅಡುಗೆ ಪ್ರಕ್ರಿಯೆಯಲ್ಲಿ ತೇವಾಂಶವನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆ ಮಾಡಲಾಗಿತ್ತು. ಇದರ ಪರಿಣಾಮವಾಗಿ ಅರವಣ ಕಲ್ಲಿನಂತೆ ಗಟ್ಟಿಯಾಗಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಯಾವುದೇ ಕಾರಣವಾಗಿರಲಿ, ಇದರಿಂದ ದೇವಸ್ವಂ ಮಂಡಳಿಗೆ ಭಾರಿ ಆರ್ಥಿಕ ನಷ್ಟ ಎದುರಾಗಿದೆ.

ಅರವಣವನ್ನು ಅಕ್ಕಿ, ಬೆಲ್ಲ, ಅರಿಶಿನ ಪುಡಿ, ಏಲಕ್ಕಿ, ದ್ರಾಕ್ಷಿ, ತುಪ್ಪ ಮೊದಲಾದ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದಕ್ಕಾಗಿ ಮಹಾರಾಷ್ಟ್ರದಿಂದ ತರಿಸಲಾದ ಬೆಲ್ಲವನ್ನು ಉಪಯೋಗಿಸಲಾಗುತ್ತದೆ. ಹಿಂದೆ ಉಂಡ ಬೆಲ್ಲವನ್ನು ಖರೀದಿಸಿ ಬೆಲ್ಲದ ನೀರು ತಯಾರಿಸಿ ಅರವಣ ಮಾಡಲು ಬಳಸಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಉಂಡೆ ಬೆಲ್ಲದ ಬದಲಿಗೆ ಬೆಲ್ಲದ ಪುಡಿಯನ್ನು ಖರೀದಿಸಲಾಗುತ್ತಿದೆ. ಪಂಪಾದಲ್ಲಿರುವ ಆಹಾರ ಸುರಕ್ಷತಾ ಇಲಾಖೆಯ ಪ್ರಯೋಗಾಲಯದಲ್ಲಿ ಬೆಲ್ಲದ ಗುಣಮಟ್ಟ ಪರಿಶೀಲನೆಯಾದ ಬಳಿಕವೇ ಅದನ್ನು ಸನ್ನಿಧಾನಕ್ಕೆ ಕಳುಹಿಸಲಾಗುತ್ತದೆ. ಹೀಗಿರುವಾಗ ವಿಭಿನ್ನ ಗುಣಮಟ್ಟದ ಬೆಲ್ಲವು ಸನ್ನಿಧಾನಕ್ಕೆ ಹೇಗೆ ತಲುಪಿತು ಎಂಬ ಕುರಿತು ತನಿಖೆ ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಗಿದೆ.

ಅರವಣದ ಸಮಸ್ಯೆಯ ಬಗ್ಗೆ ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಅವರು ಕರೆದಿದ್ದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರು. ಶಬರಿಮಲೆಯ ಆದಾಯದ ಪ್ರಮುಖ ಭಾಗ ಅರವಣ ಮಾರಾಟದಿಂದಲೇ ಲಭಿಸುವುದರಿಂದ, ಸದ್ಯ ಗಟ್ಟಿಯಾದ ಅರವಣವನ್ನು ಮಾರಾಟ ಮಾಡದೇ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಸೂಚನೆ ನೀಡಲಾಗಿದೆ.

ಮಂಡಲಕಲಾ ಅವಧಿಯಲ್ಲಿ ಶಬರಿಮಲೆ ದೇವಾಲಯದ ಒಟ್ಟು ಆದಾಯ ₹332.77 ಕೋಟಿ ರೂ. ಆಗಿದ್ದು, ಇದರಲ್ಲಿ ಸುಮಾರು ₹200 ಕೋಟಿ ರೂ. ಅರವಣ ಮಾರಾಟದಿಂದ ಬಂದಿದೆ. ಈ ಹಿನ್ನೆಲೆಯಲ್ಲಿ ಅರವಣ ವಿತರಣೆಗೆ ಸಂಬಂಧಿಸಿದಂತೆ ನಿಯಂತ್ರಣಗಳನ್ನು ಕಠಿಣಗೊಳಿಸಲಾಗಿದೆ. ಒಬ್ಬ ಯಾತ್ರಿಕರಿಗೆ ಗರಿಷ್ಠ 20 ಡಬ್ಬಿ ಅರವಣ ಮಾತ್ರ ನೀಡಲು ನಿರ್ಧರಿಸಲಾಗಿದ್ದು, ಯಾತ್ರಿಕರ ಅಪೂರ್ವ ದಟ್ಟಣೆ ಹಿನ್ನೆಲೆಯಲ್ಲಿ ಇನ್ನಷ್ಟು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ದೇವಸ್ವಂ ಮಂಡಳಿ ಪರಿಗಣಿಸುತ್ತಿದೆ.