ಶಿಸ್ತು ಮರೆತ ಕಪ್ಪುಕುಳಿ: ವಿಜ್ಞಾನದ ‘ಸ್ಪೀಡ್ ಲಿಮಿಟ್’ ಮೀರಿದ ಕತ್ತಲ ಲೋಕದ ಗೂಂಡಾ!

ವಿಜ್ಞಾನ ಎನ್ನುವುದು ಅನೇಕ ಬಾರಿ ನಮಗೆ ಗೊತ್ತು ಅಂದುಕೊಂಡಿದ್ದನ್ನೆಲ್ಲಾ ಸುಳ್ಳು ಮಾಡಿಬಿಡುತ್ತದೆ. ನಾವು ಹಳ್ಳಿಯಲ್ಲಿ ಯಾವುದಾದರೂ ಹುಡುಗ ಅತಿಯಾಗಿ ಊಟ ಮಾಡುತ್ತಿದ್ದರೆ ʻಇವನ ಹೊಟ್ಟೆಗೇನು ಮಿತಿ ಇಲ್ವಾ?’ ಎಂದು ಬೈಯುತ್ತೇವಲ್ಲ, ಹಾಗೆಯೇ ಈ ಅಂತರಿಕ್ಷದ ಆಳದಲ್ಲಿ ಒಂದು ಕಪ್ಪುಕುಳಿ ಸಿಕ್ಕಿದೆ. ಅದರ ಹೆಸರು ID830. ಈ ನಕ್ಷತ್ರಲೋಕದ ʻಬಕಾಸುರ’ ಎಷ್ಟು ಭಯಂಕರವಾಗಿದ್ದಾನೆಂದರೆ, ಬ್ರಹ್ಮಾಂಡದ ಸಕಲ ನಿಯಮಗಳನ್ನೂ ಇವನು ಕಸದ ಬುಟ್ಟಿಗೆ ಎಸೆದಿದ್ದಾನೆ!

ಸಾಮಾನ್ಯವಾಗಿ ವಿಜ್ಞಾನಿಗಳು ಕಪ್ಪುಕುಳಿಗಳಿಗೂ ಒಂದು ನೈತಿಕತೆ ಅಥವಾ ಶಿಸ್ತು ಇದೆ ಅಂದುಕೊಂಡಿದ್ದರು. ಅದನ್ನೇ ಅವರು ʻಎಡಿಂಗ್ಟನ್ ಲಿಮಿಟ್’ (Eddington limit) ಎಂದು ಕರೆಯುತ್ತಾರೆ. ಅಂದರೆ, ಕಪ್ಪುಕುಳಿ ತನ್ನ ಸಮೀಪ ಬಂದದ್ದನ್ನೆಲ್ಲಾ ನುಂಗುವಾಗ, ಅತಿಯಾದ ವೇಗದಿಂದಾಗಿ ಅಲ್ಲಿಂದ ಹೊರಬರುವ ಶಾಖ ಮತ್ತು ವಿಕಿರಣವೇ ಮತ್ತೆ ಆಹಾರ ಒಳಬರದಂತೆ ತಡೆಯುತ್ತದೆ. ಇದು ಕಪ್ಪುಕುಳಿಗಳ ಜಗತ್ತಿನ ಒಂದು ರೀತಿಯ ʻಸೆಲ್ಫ್ ಕಂಟ್ರೋಲ್’.

ಆದರೆ ಈ ID830 ಇದೆಯಲ್ಲ, ಅದು ಅಪ್ಪಟ ಗೂಂಡಾ!
ಈ ಕಿಲಾಡಿ ಕಪ್ಪುಕುಳಿ ಆ ಎಡಿಂಗ್ಟನ್ ಮಿತಿಗಿಂತ ಬರೋಬ್ಬರಿ 13 ಪಟ್ಟು ಹೆಚ್ಚು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಅಂದರೆ, ಇದಕ್ಕೆ ಹೊಟ್ಟೆ ತುಂಬುವುದು ಎನ್ನುವುದೇ ಇಲ್ಲ. ಯಾವುದೋ ದೈತ್ಯ ನಕ್ಷತ್ರವನ್ನೋ ಅಥವಾ ಅನಿಲದ ಮೋಡವನ್ನೋ ಇದು ಹರಿದು ಮುಕ್ಕುತ್ತಿದೆ. ಇಲ್ಲಿ ತಮಾಷೆ ಏನೆಂದರೆ, ಕಪ್ಪುಕುಳಿ ಅತಿಯಾಗಿ ತಿಂದಾಗ ಎಕ್ಸ್-ರೇ ಮತ್ತು ರೇಡಿಯೋ ಕಿರಣಗಳನ್ನು ಒಟ್ಟಿಗೆ ಬಿಡುಗಡೆ ಮಾಡಬಾರದು ಎನ್ನುವುದು ವಿಜ್ಞಾನಿಗಳ ತರ್ಕವಾಗಿತ್ತು. ಆದರೆ ಈ ID830 ಇದೆಯಲ್ಲ, ಅದು ಎರಡನ್ನೂ ಒಟ್ಟಿಗೆ ಉಗುಳುತ್ತಿದೆ! ಇದನ್ನು ನೋಡಿದರೆ ನಮಗೆ ಜಗತ್ತಿನ ಬಗ್ಗೆ ಇನ್ನೂ ಎಷ್ಟೊಂದು ತಿಳಿಯುವುದು ಬಾಕಿ ಇದೆ ಅನ್ನಿಸುತ್ತದೆ.

ಈ ರಾಕ್ಷಸನ ಗಾತ್ರ ಕೇಳಿದರೆ ನೀವು ಹೌಹಾರಿ ಹೋಗುತ್ತೀರಿ. ಇಂದಿನಿಂದ ಸುಮಾರು 1,200 ಕೋಟಿ ವರ್ಷಗಳ ಹಿಂದೆ, ಅಂದರೆ ಈ ಇಡೀ ಸೃಷ್ಟಿಯೇ ಇನ್ನೂ ಹದಿಹರೆಯದಲ್ಲಿದ್ದಾಗ, ಇದರ ತೂಕ ನಮ್ಮ ಸೂರ್ಯನಿಗಿಂತ 44 ಕೋಟಿ ಪಟ್ಟು ಹೆಚ್ಚಿತ್ತು! ನಮ್ಮ ಕ್ಷೀರಪಥದ ಮಧ್ಯಭಾಗದಲ್ಲಿರುವ ಕಪ್ಪುಕುಳಿಗಿಂತ ಇದು ನೂರು ಪಟ್ಟು ದೊಡ್ಡದು.

ಈ ದೈತ್ಯನ ಬೆಳವಣಿಗೆ ಸುಮ್ಮನೇ ಆಗುತ್ತಿಲ್ಲ. ಇವನು ಬೆಳೆಯುತ್ತಿರುವುದು ತನ್ನ ಸುತ್ತಲಿರುವ ಗ್ಯಾಲಕ್ಸಿಯ ವೆಚ್ಚದಲ್ಲಿ. ಇವನು ಅತಿಯಾಗಿ ತಿಂದು ಹೊರಹಾಕುವ ಬೆಂಕಿ ಮತ್ತು ವಿಕಿರಣದ ಉಂಡೆಗಳು ಸುತ್ತಲಿರುವ ಗ್ಯಾಲಕ್ಸಿಯ ಅನಿಲವನ್ನೆಲ್ಲಾ ಚದುರಿಸಿಬಿಡುತ್ತಿವೆ. ಪರಿಣಾಮವೇನು? ಆ ಗ್ಯಾಲಕ್ಸಿಯಲ್ಲಿ ಹೊಸ ನಕ್ಷತ್ರಗಳು ಹುಟ್ಟುವುದೇ ನಿಂತುಹೋಗುತ್ತದೆ. ಅಂದರೆ, ಈ ಕಪ್ಪುಕುಳಿ ತಾನು ಬದುಕಲು ಮತ್ತು ಬೆಳೆಯಲು ತನ್ನ ಮನೆಯವರನ್ನೆಲ್ಲಾ ಬೀದಿಗೆ ತಳ್ಳುತ್ತಿದ್ದಾನೆ!

ಈ ಅಂತರಿಕ್ಷದ ಆಟಗಳೇ ಹೀಗೆ. ನಾವು ಭೂಮಿಯ ಮೇಲೆ ಕುಳಿತು ಕೇವಲ ತರ್ಕ ಮಾಡುತ್ತಿರುತ್ತೇವೆ. ಆದರೆ ಅಲ್ಲಿ ಯಾವುದೋ ಸಣ್ಣ ಸಂದುಗೊಂದಿಯಲ್ಲಿ ಇಂತಹ ವಿಚಿತ್ರ ಲೋಕಗಳು ಹುಟ್ಟಿಕೊಂಡಿರುತ್ತವೆ. ಜೇಮ್ಸ್ ವೆಬ್ ಎಂಬ ಹೊಸ ಕಣ್ಣು ನಮಗೆ ಸಿಕ್ಕಿದ್ದೇ ತಡ, ವಿಜ್ಞಾನಿಗಳ ಹಳೆಯ ಪುಸ್ತಕಗಳೆಲ್ಲಾ ಈಗ ಅಪ್ರಸ್ತುತ ಅನ್ನಿಸುತ್ತಿವೆ.

ಸತ್ಯ ಹೇಳಬೇಕೆಂದರೆ, ನಿಸರ್ಗದ ಈ ಮರ್ಮಗಳನ್ನು ಅರಿಯಲು ಹೋದಷ್ಟೂ ನಮಗೆ ಅಚ್ಚರಿಗಳೇ ಎದುರಾಗುತ್ತವೆ. ಈ ID830 ಕೂಡ ಹಾಗೆಯೇ—ನಮಗೆ ಗೊತ್ತಿರುವ ಬೌತವಿಜ್ಞಾನದ ಮಿತಿಗಳನ್ನು ಅಣಕಿಸುತ್ತಾ ಅಲ್ಲಿ ಆರಾಮವಾಗಿ ವಿರಾಜಮಾನವಾಗಿದೆ!

error: Content is protected !!