ಖಾಕಿ ಪಡೆ ನಡೆಸಿದ ಮಿಂಚಿನ ಕಾರ್ಯಾಚರಣೆ: 11 ಗಂಟೆಗಳಲ್ಲೇ ಬೈಕ್ ಚೋರರು ಬಲೆಗೆ

ಮಣಿಪಾಲ: ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ದೂರು ದಾಖಲಾದ ಕೇವಲ 11 ಗಂಟೆಗಳ ಅವಧಿಯಲ್ಲಿ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು 80 ಬಡಗಬೆಟ್ಟು ಗ್ರಾಮದ ನೇತಾಜಿನಗರ ನಿವಾಸಿಗಳಾದ ಶರತ್ (26) ಮತ್ತು ಗಣೇಶ್ (31) ಎಂದು ಗುರುತಿಸಲಾಗಿದೆ.

ಇವರ ಮೇಲೆ ಮಣಿಪಾಲ, ಉಡುಪಿ ಮಾತ್ರವಲ್ಲದೆ ಮಲೆನಾಡಿನ ತಪ್ಪಲುಗಳಾದ ಕೊಪ್ಪ, ತೀರ್ಥಹಳ್ಳಿ, ಭದ್ರಾವತಿ ಮತ್ತು ಕಾಫಿನಾಡು ಕೊಡಗಿನ ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ಈ ಜೋಡಿಯ ಮೇಲೆ ಹನ್ನೊಂದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಫೆಬ್ರವರಿ 21ರಂದು ರಾಹುಲ್‌ನಗರದ ಭಜನಾ ಮಂದಿರದ ಬಳಿ ಸುದರ್ಶನ್ ಎಂಬುವವರು ನಿಲ್ಲಿಸಿದ್ದ ಬೈಕ್ ಮೇಲೆ ಕಣ್ಣಿಟ್ಟ ಈ ಆರೋಪಿಗಳು, ಕ್ಷಣಾರ್ಧದಲ್ಲಿ ಅದನ್ನು ಮಾಯ ಮಾಡಿದ್ದರು. ಸುದರ್ಶನ್ ಅವರು ಠಾಣೆ ಮೆಟ್ಟಿಲೇರಿದಾಗ ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಿಳಿದರು. ಹಗಲಿರುಳು ಅಲೆದಾಡಿ, ಸುಳಿವು ಹಿಡಿದ ಪೊಲೀಸರ ತನಿಖೆಗೆ ಕೇವಲ ಹನ್ನೊಂದೇ ಗಂಟೆಗಳಲ್ಲಿ ಜಯ ಸಿಕ್ಕಿದೆ. ಆರೋಪಿಗಳ ವಶದಲ್ಲಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ಅವರಿಬ್ಬರನ್ನೂ ಈಗ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

error: Content is protected !!