ಪುತ್ತೂರು: ಸಹಪಾಠಿಯನ್ನೇ ನಂಬಿ ಮೋಸಹೋಗಿ, ಮಗುವಾದ ನಂತರವೂ ನ್ಯಾಯ ಸಿಗದೆ ನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಭಾವಿ ಕುಟುಂಬದ ಹಿನ್ನೆಲೆಯುಳ್ಳ ಆರೋಪಿಯ ದರ್ಪ ಮತ್ತು ಸಮಾಜದ ನಿರಂತರ ಹೀಯಾಳಿಕೆಯಿಂದ ಮನನೊಂದು ಯುವತಿ ಈ ನಿರ್ಧಾರಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ.

ಪುತ್ತೂರಿನ ಉಚ್ಚಾಟಿತ ಬಿಜೆಪಿ ಮುಖಂಡರೊಬ್ಬರ ಪುತ್ರ ಜೆ. ಕೃಷ್ಣ ರಾವ್ ಎಂಬಾತ ತನ್ನ ಸಹಪಾಠಿಯಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಇದರ ಪರಿಣಾಮವಾಗಿ ಯುವತಿ ಗರ್ಭಿಣಿಯಾಗಿದ್ದು, ನಂತರ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಮಗು ಹುಟ್ಟಿದ ನಂತರ ಕೃಷ್ಣ ರಾವ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಲ್ಲದೆ, ತಾನು ಮಗುವಿನ ತಂದೆಯಲ್ಲ ಎಂದು ವಾದಿಸಿದ್ದನು.

ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಡಿಎನ್‌ಎ (DNA) ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯ ವರದಿಯಲ್ಲಿ ಜೆ. ಕೃಷ್ಣ ರಾವ್ ಆ ಮಗುವಿನ ಜೈವಿಕ ತಂದೆ ಎಂಬುದು ಅಧಿಕೃತವಾಗಿ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೂ ಕಳುಹಿಸಿದ್ದರು. ಆದರೆ, ಕೇವಲ ಎರಡು ತಿಂಗಳ ಅವಧಿಯಲ್ಲಿ ಆರೋಪಿ ಜಾಮೀನಿನ ಮೇಲೆ ಹೊರಬಂದಿದ್ದು ಯುವತಿಯ ಅತಂತ್ರ ಸ್ಥಿತಿಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಮಗುವಿನ ತಂದೆ ಎಂಬುದು ಸಾಬೀತಾದ ಮೇಲೂ ಆರೋಪಿಯ ಕುಟುಂಬ ʻಜಾತಿ’ಯ ಕಾರಣವನ್ನು ಮುಂದಿಟ್ಟು ಮದುವೆಗೆ ಒಪ್ಪುತ್ತಿಲ್ಲ. ಅನೇಕ ರಾಜಕೀಯ ಮುಖಂಡರು ಮತ್ತು ಸಂಘಟನೆಗಳು ಮಾತುಕತೆ ನಡೆಸಿದರೂ ಕುಟುಂಬದವರು ತಮ್ಮ ಹಠ ಬಿಡುತ್ತಿಲ್ಲ ಎನ್ನಲಾಗಿದೆ. ಇತ್ತ ಆರೋಪಿ ಆರಾಮವಾಗಿ ಓಡಾಡಿಕೊಂಡಿದ್ದರೆ, ಸಂತ್ರಸ್ತೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಜನರ ಕುಹಕ ಮತ್ತು ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ.
ನ್ಯಾಯ ಸಿಗದ ನೋವು ಮತ್ತು ಸಮಾಜದ ಟೀಕೆಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಯುವತಿ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ.
