ಟೆಹ್ರಾನ್: ಇರಾನ್‌ನ ರಾಜಧಾನಿ ಟೆಹ್ರಾನ್‌ನ ಬೀದಿಗಳಲ್ಲಿ ಈಗ ಶಾಂತಿಯ ಬದಲಿಗೆ ಯುದ್ಧದ ಕಾರ್ಮೋಡ ಹರಡಿದೆ. ಅತ್ತ ವಾಷಿಂಗ್ಟನ್‌ನಲ್ಲಿ ಕುಳಿತಿರುವ ಡೊನಾಲ್ಡ್ ಟ್ರಂಪ್ ಅವರ ಬೆರಳುಗಳು ಕ್ಷಿಪಣಿಯ ಬಟನ್ ಮೇಲಿವೆಯೇನೋ ಎನ್ನುವಷ್ಟು ಆತಂಕ ಮನೆ ಮಾಡಿದೆ. ಅಮೆರಿಕದ ಎಫ್-35 ವಿಮಾನಗಳು ಇರಾನ್ ಗಡಿಯ ಮೇಲೆ ಹಾರಾಡುತ್ತಿದ್ದರೆ, ಇತ್ತ ನಮ್ಮ ಭಾರತದ ಸುಮಾರು ಎರಡು ಸಾವಿರ ವೈದ್ಯಕೀಯ ವಿದ್ಯಾರ್ಥಿಗಳು ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದಾರೆ.

ಭಾರತ ಸರ್ಕಾರ ಈಗಾಗಲೇ ಒಂದು ‘ಅಡ್ವೈಸರಿ’ ಹೊರಡಿಸಿ, “ತಕ್ಷಣ ಇರಾನ್ ಬಿಟ್ಟು ಹೊರಬನ್ನಿ” ಎಂದು ಸೂಚನೆ ನೀಡಿದೆ. ಆದರೆ ಹೊರಬರುವುದು ಅಷ್ಟು ಸುಲಭವೇ? ಆ ವಿದ್ಯಾರ್ಥಿಗಳ ಪಾಲಿಗೆ ಈಗ ಎದುರಾಗಿರುವುದು ‘ಪರೀಕ್ಷೆಯೋ ಅಥವಾ ಪ್ರಾಣವೋ?’ ಎಂಬ ಯಕ್ಷಪ್ರಶ್ನೆ.
ಮಾರ್ಚ್ 5ಕ್ಕೆ ಈ ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾದ ‘ಒಲಮ್-ಎ-ಪಾಯೆ’ (Olum-e-Paye) ಎಂಬ ವೈದ್ಯಕೀಯ ಪರೀಕ್ಷೆಗಳಿವೆ. ಈ ಪರೀಕ್ಷೆ ಬರೆಯದಿದ್ದರೆ ಅವರು ಡಾಕ್ಟರ್ ಆಗುವ ಕನಸು ಕನಿಷ್ಠ ಆರು ತಿಂಗಳು ಮುಂದೂಡಲ್ಪಡುತ್ತದೆ. ಅಲ್ಲಿನ ವಿಶ್ವವಿದ್ಯಾಲಯಗಳೋ ಮೊಂಡುತನ ಪ್ರದರ್ಶಿಸುತ್ತಿವೆ; ಪರೀಕ್ಷೆ ಮುಂದೂಡುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ಇರಾನ್‌ನಲ್ಲಿ ಓದುತ್ತಿರುವವರಲ್ಲಿ ಬಹುತೇಕರು ಜಮ್ಮು ಮತ್ತು ಕಾಶ್ಮೀರದ ಮಧ್ಯಮ ವರ್ಗದ ಮಕ್ಕಳು. ತಂದೆ-ತಾಯಿ ಸಾಲ ಮಾಡಿ ಮಗನನ್ನು ಡಾಕ್ಟರ್ ಮಾಡಲು ಇರಾನ್‌ಗೆ ಕಳಿಸಿದ್ದಾರೆ. ಈಗ ಯುದ್ಧದ ಭಯದಿಂದ ದೇಶ ಬಿಟ್ಟು ಬಂದರೆ ಶೈಕ್ಷಣಿಕ ಭವಿಷ್ಯ ನಾಶ, ಅಲ್ಲೇ ಉಳಿದರೆ ಜೀವಕ್ಕೆ ಗ್ಯಾರಂಟಿ ಇಲ್ಲ.
ಇರಾನ್ ಒಳಗೆ ಈಗ ಅರಾಜಕತೆ ತಾಂಡವವಾಡುತ್ತಿದೆ. ಅಲ್ಲಿನ ಸುಪ್ರೀಂ ಲೀಡರ್ ವಿರುದ್ಧ ವಿದ್ಯಾರ್ಥಿಗಳೇ ದಂಗೆ ಎದ್ದಿದ್ದಾರೆ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ರಕ್ತಪಾತ ನಡೆಯುತ್ತಿದೆ. ಈ ಅಂತರ್ಯುದ್ಧದ ನಡುವೆ ನಮ್ಮ ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಗಳಲ್ಲಿ ನಡುಗುತ್ತಾ ಕುಳಿತಿದ್ದಾರೆ.

ಮೋದಿಯವರೇ ನಮ್ಮ ಕೊನೆಯ ಆಸೆ!
ಬೇರೆ ದಾರಿ ಕಾಣದ ಈ ವಿದ್ಯಾರ್ಥಿಗಳು ಈಗ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊರೆ ಇಟ್ಟಿದ್ದಾರೆ. “ಸಾಹೇಬ್ರೇ, ನೀವು ಇಸ್ರೇಲ್‌ನಲ್ಲಿದ್ದೀರಿ, ನಿಮ್ಮ ಮಾತೆಂದರೆ ಇಡೀ ಜಗತ್ತು ಕೇಳುತ್ತದೆ. ದಯವಿಟ್ಟು ಇರಾನ್ ಸರ್ಕಾರದ ಜೊತೆ ಮಾತನಾಡಿ ನಮ್ಮ ಪರೀಕ್ಷೆಗಳನ್ನು ಮುಂದೂಡಿಸಿ, ನಮಗೆ ಸುರಕ್ಷಿತವಾಗಿ ಭಾರತಕ್ಕೆ ಮರಳಲು ದಾರಿ ಮಾಡಿಕೊಡಿ” ಎನ್ನುವುದು ಅವರ ಕಳಕಳಿಯ ವಿನಂತಿ.
ರಾಜತಾಂತ್ರಿಕ ಲೋಕದಲ್ಲಿ ಮೋದಿಯವರು ಇಸ್ರೇಲ್ ಜೊತೆ ಸಪ್ತಪದಿ ತುಳಿಯುತ್ತಿರಬಹುದು. ಆದರೆ ಅದೇ ಸಮಯದಲ್ಲಿ ಇರಾನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳ ಪ್ರಾಣ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದೆ. ಅತ್ತ ಅಮೆರಿಕದ ಸಿಟ್ಟು, ಇತ್ತ ಇರಾನ್‌ನ ಬಿಗಿಪಟ್ಟು—ಇವೆರಡರ ನಡುವೆ ನಲುಗುತ್ತಿರುವುದು ಆ ಹದಿಹರೆಯದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ನಿದ್ದೆಯಿಲ್ಲದ ರಾತ್ರಿಗಳು.

ಇರಾನ್ ಬೀದಿಗಳಲ್ಲಿ ಈಗೇನಾಗ್ತಿದೆ?
ಇರಾನ್ ಒಳಗೆ ಈಗ ಅರಾಜಕತೆ ತಾಂಡವವಾಡುತ್ತಿದೆ. ಅಲ್ಲಿನ ಸುಪ್ರೀಂ ಲೀಡರ್ ಖಮೇನಿ ವಿರುದ್ಧ ವಿದ್ಯಾರ್ಥಿಗಳು ದಂಗೆ ಎದ್ದಿದ್ದಾರೆ. ಶೇ. 80ರಷ್ಟು ಕಾಲೇಜುಗಳು ಆನ್‌ಲೈನ್ ಕ್ಲಾಸ್ ಮಾಡುತ್ತಿವೆ. ಬೀದಿ ಬೀದಿಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೀತಿದೆ. ಈ ನಡುವೆ ಅಮೆರಿಕದ ಎಫ್-35 ವಿಮಾನಗಳು ಇರಾನ್ ಗಡಿಯ ಮೇಲೆ ಸುಳಿಯುತ್ತಿವೆ ಎಂಬ ಸುದ್ದಿ ಅಲ್ಲಿನವರ ಎದೆಯಲ್ಲಿ ನಡುಕ ಹುಟ್ಟಿಸಿದೆ.