ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಅಮ್ಮುಂಜೆ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನವು ಶತಮಾನಗಳ ಇತಿಹಾಸವನ್ನು ಹೊಂದಿದೆ. ಮೂರು ಮೂರ್ತಿಗಳಿರುವ ಈ ಪುಣ್ಯಕ್ಷೇತ್ರವು ಅಮ್ಮುಂಜೆ ಗ್ರಾಮದ ಆರಾಧ್ಯ ದೇವರಾಗಿ ಭಕ್ತರಿಂದ ಪೂಜಿಸಲ್ಪಡುತ್ತಿದೆ. ಇಲ್ಲಿನ ಪ್ರಧಾನ ದೇವರು ಜನಾರ್ದನನಾಗಿದ್ದರೂ, “ಅಮ್ಮುಂಜೆ ಶ್ರೀ ವಿನಾಯಕ ದೇವಸ್ಥಾನ” ಎಂದೇ ಇದು ಪ್ರಸಿದ್ಧವಾಗಿದ್ದು, ಸರ್ಕಾರಿ ದಾಖಲೆಗಳಲ್ಲಿಯೂ ಇದೇ ಹೆಸರಿನಲ್ಲಿ ಉಲ್ಲೇಖವಿದೆ.


ದೇವಸ್ಥಾನದ ಆಡಳಿತ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದ್ದು, ಸಮಗ್ರ ಜೀರ್ಣೋದ್ಧಾರ ಕಾರ್ಯವನ್ನು ಹಮ್ಮಿಕೊಂಡಿದೆ. ಊರ ಸಮಸ್ತರನ್ನು ಒಗ್ಗೂಡಿಸಿ, ಭವ್ಯವಾದ ದೇವಸ್ಥಾನವನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ, ಜೀರ್ಣೋದ್ಧಾರ ನಿಧಿಗೆ ಸಂಗ್ರಹಕ್ಕೆ ಚಾಲನೆ ನೀಡುವ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರ ಪೊಳಲಿ ದೇವಸ್ಥಾನದ ಆಡಳಿತ ಮೊಕೇಸರರಾದ ಡಾ. ಎ. ಮಂಜಯ್ಯ ಶೆಟ್ಟಿ ಅವರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಿಧಿ ಕುಂಭಕ್ಕೆ ಚಾಲನೆ ನೀಡಿ, ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಅಮ್ಮುಂಜೆ ಗುತ್ತು ಸೋಮಶೇಖರ ಶೆಟ್ಟಿ, ಆಡಳಿತ ಮೊಕೇಸರರಾದ ನಾಗೇಶ್ ರಾವ್, ಸುದೇಶ್ ಕುಮಾರ್ ರೈ, ಉದ್ಯಮಿ ಉಮೇಶ್ ಸಾಲ್ಯಾನ್, ರಾಧಾಕೃಷ್ಣ ತಂತ್ರಿ ಪೊಳಲಿ, ಕ್ಷೇತ್ರದ ಅರ್ಚಕ ಶಶಿಧರ್ ಭಟ್, ಚಂದ್ರಶೇಖರ ಭಂಡಾರಿ, ಜನಾರ್ಧನ ಕನ್ಯಾಬೆಟ್ಟು, ವಿಜಯ್ ಸುವರ್ಣ, ಜನಾರ್ಧನ ಅಮ್ಮುಂಜೆ, ಉದಯ್, ಹರೀಶ್ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
