ಕೊಚ್ಚಿ: ಮೊಬೈಲ್ ಮೂಲಕ ತ್ರಿವಳಿ ತಲಾಖ್ ಹೇಳಿ ಪತ್ನಿಯನ್ನು ದೈಹಿಕ ಹಾಗೂ ಮಾನಸಿಕ ಕ್ರೌರ್ಯಕ್ಕೆ ಒಳಪಡಿಸಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯನ್ನು ಅಲಪ್ಪುಳ ಜಿಲ್ಲೆಯ ಕಾರ್ತಿಕಪ್ಪಲ್ಲಿ ತಾಲೂಕಿನ ಮೂಲದ ಸುಹೈಲ್ ಎಂದು ಗುರುತಿಸಲಾಗಿದೆ. ಮುವಾಟ್ಟುಪುಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 85ರ ಅಡಿಯಲ್ಲಿ (ಪತಿ ಅಥವಾ ಸಂಬಂಧಿಕರಿಂದ ಮಹಿಳೆಯ ಮೇಲೆ ಕ್ರೌರ್ಯ) ಈ ಕೇಸ್ ದಾಖಲಾಗಿದೆ. ಜೊತೆಗೆ, ತ್ರಿವಳಿ ತಲಾಖ್ ಅನ್ನು ಅಮಾನ್ಯ ಮತ್ತು ಕಾನೂನುಬಾಹಿರವೆಂದು ಪರಿಗಣಿಸುವ ʻಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ, 2019’ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿಯೂ ಕ್ರಮ ಜರುಗಿಸಲಾಗಿದೆ.

ಸುಹೈಲ್ ದಂಪತಿ 2016ರ ಸೆಪ್ಟೆಂಬರ್ 18ರಂದು ಮುಸ್ಲಿಂ ಧಾರ್ಮಿಕ ಪದ್ಧತಿಯಂತೆ ವಿವಾಹವಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ಇತ್ತೀಚೆಗೆ ವೈಮನಸ್ಸು ಉಂಟಾಗಿತ್ತು. ಮದುವೆಯ ನಂತರ ಸುಹೈಲ್ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟು ಪತ್ನಿಯ ಮೇಲೆ ದೌರ್ಜನ್ಯ ಎಸಗಲು ಪ್ರಾರಂಭಿಸಿದ್ದ ಎಂದು ಆರೋಪಿಸಲಾಗಿದೆ. ಆಕೆಯನ್ನು ಮುವಾಟ್ಟುಪುಳ ಪ್ರದೇಶದಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿದ್ದರಿಂದ, ಅನಿವಾರ್ಯವಾಗಿ ಆಕೆ ಹಾಸ್ಟೆಲ್‌ಗಳು ಹಾಗೂ ಬಾಡಿಗೆ ಮನೆಗಳಲ್ಲಿ ನೆಲೆಸಬೇಕಾಗಿತ್ತು.
2025ರ ಮೇ 21ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿಯು ಪತ್ನಿಗೆ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿದ್ದಲ್ಲದೆ, ಆಕೆಯ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ತದನಂತರ ಮೊಬೈಲ್ ಮೂಲಕ ‘ತಲಾಖ್’ ಎಂದು ಎಸ್‌ಎಂಎಸ್ ಕಳುಹಿಸಿ ವಿಚ್ಛೇದನ ನೀಡಿರುವುದಾಗಿ ತಿಳಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತಿಯು ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
