ಬ್ಯಾಂಕ್ ಅಕ್ರಮ, ಚಿನ್ನಾಭರಣ ದುರ್ಬಳಕೆ ಪ್ರಕರಣಗಳಿಗೆ ಕಠಿಣ ಶಿಕ್ಷೆ ಖಚಿತ: ಡಿಸಿಪಿ ರವಿಶಂಕರ್

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲವು ಬ್ಯಾಂಕ್ ಹಾಗೂ ಸಹಕಾರಿ ಸೊಸೈಟಿ ಸಿಬ್ಬಂದಿಯೇ ಅಕ್ರಮ ಚಟುವಟಿಕೆಗಳಲ್ಲಿ ಶಾಮೀಲಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಇಂತಹ ಗಂಭೀರ ಪ್ರಕರಣಗಳಿಗೆ ಕಠಿಣ ಶಿಕ್ಷೆ ಅನಿವಾರ್ಯ ಎಂದು ಮಂಗಳೂರು ನಗರ ಡಿಸಿಪಿ ರವಿಶಂಕರ್ ಎಚ್ಚರಿಕೆ ನೀಡಿದ್ದಾರೆ.

ಅವರು ಎಸ್‌ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಬ್ಯಾಂಕುಗಳು, ಕೃಷಿಯೇತರ ಬ್ಯಾಂಕುಗಳು ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೈಬರ್ ಅಪರಾಧಗಳು ಮತ್ತು ಸಹಕಾರಿ ಸಂಸ್ಥೆಗಳ ಭದ್ರತೆ ಕುರಿತ ಮಾರ್ಗಸೂಚಿಗಳ ಪಾಲನೆ ವಿಷಯದ ಮಾಹಿತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂದೆರಡು ಪ್ರಕರಣಗಳಲ್ಲಿ, ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನಾಭರಣವನ್ನು ತಮ್ಮ ಸ್ವಂತ ಉದ್ದೇಶಗಳಿಗೆ ಬಳಸಿ ಸಿಕ್ಕಿಬಿದ್ದಿರುವುದು ಬೆಳಕಿಗೆ ಬಂದಿದೆ. ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯವರೆಗೂ ವಿಧಿಸುವ ಸಾಧ್ಯತೆ ಇದೆ ಎಂದು ಡಿಸಿಪಿ ರವಿಶಂಕರ್ ಸ್ಪಷ್ಟಪಡಿಸಿದರು.

ಮಾತು ಮುಂದುವರಿಸಿದ ಡಿಸಿಪಿ ರವಿಶಂಕರ್, ಬ್ಯಾಂಕ್ ದರೋಡೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಇತ್ತೀಚಿನ ಪ್ರಕರಣಗಳು ತೋರಿಸಿವೆ ಎಂದರು. ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಅಂತಾರಾಜ್ಯ ದರೋಡೆ ತಂಡ ಭಾಗಿಯಾಗಿದ್ದು, ಅದೇ ಬ್ಯಾಂಕ್ ಆಯ್ಕೆ ಮಾಡಲು ಕಾರಣ ಅಲ್ಲಿದ್ದ ಭದ್ರತಾ ಲೋಪಗಳು ಎಂದು ಅವರು ವಿವರಿಸಿದರು.

“ಸಿಸಿ ಕ್ಯಾಮೆರಾ ಇರಲಿಲ್ಲ, ಸ್ಟ್ರಾಂಗ್ ರೂಮ್‌ಗೆ ಸಮರ್ಪಕ ಬೀಗ ಇರಲಿಲ್ಲ, ಸಾಮರ್ಥ್ಯಕ್ಕಿಂತ ಅಧಿಕ ಪ್ರಮಾಣದ ಚಿನ್ನಾಭರಣ ಸಂಗ್ರಹಿಸಲಾಗಿತ್ತು. ಈ ಲೋಪಗಳನ್ನೇ ದುರುಪಯೋಗಪಡಿಸಿಕೊಂಡು ಕೇವಲ ಆರು ನಿಮಿಷಗಳಲ್ಲಿ ದರೋಡೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ಆದರೆ ಪೊಲೀಸರು ಕೇವಲ ಏಳು ದಿನಗಳೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಇದು ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಗೆ ಸ್ಪಷ್ಟ ಸಾಕ್ಷಿ” ಎಂದು ಹೇಳಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಬ್ಯಾಂಕ್ ದರೋಡೆ ಪ್ರಕರಣವನ್ನು ಪೊಲೀಸರು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರಿಂದ ಗ್ರಾಹಕರು ನಿಶ್ಚಿಂತರಾಗಿ ಬ್ಯಾಂಕ್ ವ್ಯವಹಾರ ನಡೆಸಲು ಸಾಧ್ಯವಾಗಿದೆ ಎಂದರು. “ಬ್ಯಾಂಕ್ ಗ್ರಾಹಕರು ಮತ್ತು ಸಿಬ್ಬಂದಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ನಮ್ಮೊಂದಿಗೆ ಕೈಜೋಡಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಾದ ರೋಹಿಣಿ ಸಿ.ಕೆ., ಮಂಜುನಾಥ್, ಅನಿಲ್ ಕುಮಾರ್ ಮೂಲರೆಡ್ಡಿ, ಭೂಮರಡ್ಡಿ, ಎಸ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬೊಳ್ಯೊಟ್ಟು, ಬ್ಯಾಂಕ್ ಸಿಇಒ ಗೋಪಾಲಕೃಷ್ಣ ಭಟ್, ಮೋನಪ್ಪ ಶೆಟ್ಟಿ ಎಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಗೋಪಾಲಕೃಷ್ಣ ಭಟ್ ಧನ್ಯವಾದ ಸಮರ್ಪಿಸಿದರು.

error: Content is protected !!