BREAKING NEWS!!! ಗುರುಪುರ: ನದಿಗೆ ಹಾರಿದ ಯುವತಿಯ ಶವ ಪತ್ತೆ

ಮಂಗಳೂರು: ಸುಸೈಡ್‌ ಸ್ಪಾಟ್‌ ಎಂದೇ ಗುರುತಿಸಲಾದ ಗುರುಪುರ ಹೊಸ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವತಿಯ ಶವ ಪತ್ತೆಯಾಗಿದ್ದು, ಈಕೆ ನಿಡ್ಡೋಡಿ ಮೂಲದವಳು ಎಂದು ಹೇಳಲಾಗುತ್ತಿದೆ. ಪ್ರತ್ಯಕ್ಷಿದರ್ಶಿಗಳ ಪ್ರಕಾರ ಈಕೆಯೊಂದಿಗೆ ಇನ್ನೊಬ್ಬಳು ಕೂಡ ಇದ್ದಳೆಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆ ಹನ್ನೊಂದು ಗಂಟೆಯ ಸುಮಾರಿಗೆ ಯುವತಿ ಇನ್ನೊಬ್ಬಳೊಂದಿಗೆ ಆಗಮಿಸಿ ನದಿಗೆ ಹಾರಿದ್ದು, ಇದನ್ನು ಸ್ಥಳೀಯರು ಗಮನಿಸಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ದೌಢಾಯಿಸಿದ್ದ ಬಜ್ಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಯುವತಿಗಾಗಿ ಹುಡುಕಾಟ ಆರಂಭಿಸಿದ್ದರು. ತೀವ್ರ ಹುಡುಕಾಟದ ಬಳಿಕ ಇಂದು ಸುಮಾರು ಮೂರು ಗಂಟೆಯ ಸುಮಾರಿಗೆ ಯುವತಿಯ ಶವ ಪತ್ತೆಯಾಗಿದೆ.

ಯುವತಿ ಮೂಡಬಿದ್ರೆಯ ಜ್ಯುವೆಲ್ಲರ್ಸ್‌ ಮಳಿಗೆಯೊಂದರ ಉದ್ಯೋಗಿ ಎಂದು ಹೇಳಲಾಗುತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹರಡಿದ ಮಾಹಿತಿ ಪ್ರಕಾರ ನವ್ಯಾ ಎಂದು ಹೇಳಲಾಗುತ್ತಿದೆ. ಈಕೆಯ ಸ್ಕೂಟಿ ಕೂಡ ನದಿಯ ಪಕ್ಕದಲ್ಲಿಯೇ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಈಕೆಯ ಅಧಿಕೃತ ಮಾಹಿತಿಯನ್ನು ಪೊಲೀಸ್‌ ಇಲಾಖೆಯ ತನಿಖೆಯಿಂದ ತಿಳಿದುಬರಬೇಕಿದೆ.

ಈಕೆಯೊಂದಿಗೆ ದಡದಲ್ಲಿ ಇನ್ನೊಬ್ಬಳು ಯುವತಿ ಇದ್ದಳು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುರುಪುರ ಹೊಸ ಸೇತುವೆ ಸುಸೈಡ್‌ ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದು, ಅನೇಕ ಮಂದಿ ಇಲ್ಲಿಂದಲೇ ಹಾರಿ ಪ್ರಾಣಾರ್ಪಣೆ ಮಾಡಿದ್ದಾರೆ. ಈ ಹಿಂದೆ ಉಳ್ಳಾಲ ಸೇತುವೆ ಸುಸೈಡ್‌ ಸ್ಪಾಟ್‌ ಆಗಿ ಗುರುತಿಸಿಕೊಂಡಿತ್ತು. ಅದಕ್ಕೆ ತಂತಿ ಬೇಲಿ ಅಳವಡಿಸಿದ್ದರಿಂದ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಬಿದ್ದಿದೆ.  ಹಾಗಾಗಿ ಗುರುಪುರ ಸೇತುವೆ ಈಗ ಸುಸೈಡ್‌ ಸ್ಪಾಟ್‌ ಆಗಿ ಪರೀಣಮಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

 

error: Content is protected !!