ಮಂಗಳೂರು: ಅಂಬಾಮಹೇಶ್ವರಿ ಕ್ಷೇಮಾಭಿವೃದ್ಧಿ ಸಂಘವು 2015ರಲ್ಲಿ ಸ್ಥಾಪಿತವಾಗಿದ್ದು, ಕಳೆದ ಹತ್ತು ವರ್ಷಗಳಿಂದ ಮಂಗಳೂರು ನಗರದಲ್ಲಿ ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಕೈಜೋಡಿಸಿ, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ‘ಅವೇಕ್ ಕುಡ್ಲ’ (awake kudla) ಅಪ್ಲಿಕೇಷನ್‌ಗೆ ಜ.1ರಂದು ಚಾಲನೆ ಸಿಗಲಿದ್ದು, ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆ ಸಂಬಂಧಿ ಸಮಸ್ಯೆಗಳಿದ್ದರೆ ದೂರು ನೀಡಬಹುದು ಎಂದು ಎಂದು ಸಂಘದ ಅಧ್ಯಕ್ಷ ಸೀತಾರಾಮ ಎ. ತಿಳಿಸಿದರು.

ಅವರು ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಮಾಜಮುಖಿ ಚಟುವಟಿಕೆಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳಿಗೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ವಿಸ್ತರಿಸುವ ಉದ್ದೇಶದಿಂದ, ಮಾಜಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರು ಇದೇ ವರ್ಷ ಎ.4ರಂದು ‘ಅವೇಕ್ ಕುಡ್ಲ’ ಪರಿಕಲ್ಪನೆಗೆ ಚಾಲನೆ ನೀಡಿದ್ದರು. ಇದೀಗ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ‘ಅವೇಕ್ ಕುಡ್ಲ’ ಆ್ಯಪ್ ಮೂಲಕ ಸಾರ್ವಜನಿಕರು ನೇರವಾಗಿ ದೂರು ದಾಖಲಿಸಬಹುದು. ದಾಖಲಾಗುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಸಹಯೋಗ ಹಾಗೂ ಸ್ಥಳೀಯರ ಭಾಗವಹಿಸುವಿಕೆಯಿಂದ “ಅಧ್ಯಯನ–ಜಾಗೃತಿ–ಮೇಲ್ವಿಚಾರಣೆ–ಸಮನ್ವಯ–ಅನುಸರಣೆ” ಎಂಬ ಪಂಚತತ್ವದಡಿ ಪರಿಹರಿಸಲಾಗುತ್ತದೆ ಎಂದು ಸೀತಾರಾಮ ಎ. ವಿವರಿಸಿದರು.
ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್(ರಿ) ಸದಸ್ಯೆ ಡಾ. ನಯನಾ, ಮಾದರಿ ವಾರ್ಡ್ ಯೋಜನೆಯ ಅನುಭವದ ಆಧಾರದಲ್ಲಿ ಮುಂದಿನ ಹಂತವಾಗಿ ‘ಕ್ಲಸ್ಟರ್–2 ಅವೇಕ್ ಕುಡ್ಲ’ ಯೋಜನೆಯನ್ನು ‘ನವಜಾಗೃತಿ ಕಾರ್ಯಕ್ರಮ’ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿದೆ ಎಂದರು. ಈ ಕಾರ್ಯಕ್ರಮಕ್ಕೆ ಜನವರಿ 1, 2026ರಂದು ಬೆಳಿಗ್ಗೆ 8 ಗಂಟೆಗೆ ಹೊಯ್ದಬಜಾರ್‌ನ ಚಿನ್ಮಯ ಮಿಷನ್ ಮುಂಭಾಗದಲ್ಲಿ ಚಾಲನೆ ನೀಡಲಾಗುತ್ತದೆ. ರಾಮಕೃಷ್ಣ ಮಠ, ಮಂಗಳೂರು ಇವರ ಸ್ವಾಮಿ ಯುಗೇಶಾನಂದಜೀ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರ ಟ್ರಾಫಿಕ್ ಪೊಲೀಸ್ ಹಾಗೂ ಮೂರು ವಾರ್ಡುಗಳ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪೋರ್ಟ್, ಕಂಟೋನ್ಮೆಂಟ್ ಹಾಗೂ ಅತ್ತಾವರ ವಾರ್ಡುಗಳಲ್ಲಿ ಮನೆ ಮನೆ ಭೇಟಿ, ಸ್ಥಳೀಯ ಸೇವಾ ಸಂಸ್ಥೆಗಳೊಂದಿಗೆ ಸಂವಾದ, ಸುಗಮ ಸಂಚಾರ ಜಾಗೃತಿ, ವಾಣಿಜ್ಯ ಮಳಿಗೆಗಳು ಮತ್ತು ಉದ್ಯಮಗಳಿಗೆ ಮಾರ್ಗದರ್ಶನ, ಯುವಜನತೆ ಹಾಗೂ ವಸತಿ ಸಂಕೀರ್ಣಗಳಲ್ಲಿ ಹಸುರೀಕರಣ ಜಾಗೃತಿ, ಬ್ಲ್ಯಾಕ್ ಸ್ಪಾಟ್ ಫಿಕ್ಸಿಂಗ್, ಅಪಾಯಕಾರಿ ಸ್ಥಳಗಳ ದುರಸ್ತಿ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ತಜ್ಞರ ಸಮಿತಿಯ ಮಂಜುಳಾ ಗುಡ್ಡೆಹಿತ್ಲು, ಶೀಘ್ರದಲ್ಲೇ ಅಂಬಾನಗರದ ಮುಳಿಹಿತ್ತು ಪ್ರದೇಶದಲ್ಲಿ ‘1000 ಮನೆಗಳ ಪ್ರಾಯೋಗಿಕ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಯೋಜನೆ’ಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಜಾರಿಗೆ ತರಲಾಗುವುದು ಎಂದರು. ಟ್ರಸ್ಟ್‌ನ ಹತ್ತು ವರ್ಷದ ಚಟುವಟಿಕೆಗಳ ಅಂಗವಾಗಿ, ಫೆಬ್ರವರಿ 8, 2026ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಆಸಕ್ತ ಯುವಜನತೆಗೆ ರಾಮಕೃಷ್ಣ ಮಠದಲ್ಲಿ ‘ಸರ್ಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಜಾಗೃತಿ ಕಾರ್ಯಕ್ರಮ’ವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್, ಉಪಾಧ್ಯಕ್ಷ ಪ್ರವೀಣ್, ಖಜಾಂಚಿ ರಾಮಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.