ಮಂಗಳೂರು: ಪೊಲೀಸ್ ಆಗಿ ಲಾಠಿ ಬೀಸುವುದಕ್ಕೂ, ರಾಜಕೀಯದ ಅಖಾಡದಲ್ಲಿ ದಾಳ ಉರುಳಿಸುವುದಕ್ಕೂ ಆಕಾಶ ಭೂಮಿಯ ವ್ಯತ್ಯಾಸವಿದೆ. ಕರ್ನಾಟಕದ ಕಾಡು-ಮೇಡುಗಳಲ್ಲಿ ದಕ್ಷ ಅಧಿಕಾರಿಯಾಗಿ ಮಿಂಚಿದ್ದ ಅಣ್ಣಾಮಲೈ ಎಂಬ ಆ ʻಸಿಂಗಂ’ ಯಾವಾಗ ಖಾಕಿ ಕಳಚಿ ರಾಜಕೀಯವೆಂಬ ಅಜ್ಞಾತ ಅರಣ್ಯಕ್ಕೆ ಕಾಲಿಟ್ಟರೋ, ಅಂದೇ ಅವರ ಹಣೆಬರಹದ ಆಟ ಶುರುವಾಗಿತ್ತು.

ಕರ್ನಾಟಕದಲ್ಲಿ ಪೊಲೀಸ್ ಆಗಿದ್ದಾಗ ಇವರನ್ನ ಜನ ಪ್ರೀತಿಸಿದರು. ಆದರೆ, ತಮಿಳುನಾಡಿನ ರಾಜಕೀಯದ ಉಪ್ಪು ನೀರು ಇವರಿಗೆ ಅಷ್ಟು ಬೇಗ ಜೀರ್ಣವಾಗುವಂತೆ ಕಾಣುತ್ತಿಲ್ಲ.
ಪೊಲೀಸ್ ಗತ್ತು ವರ್ಸಸ್ ಪಾಲಿಟಿಕ್ಸ್ ಸೊತ್ತು!
ಕೈಲಾಸ ಯಾತ್ರೆ ಮಾಡಿ ಬಂದ ಮೇಲೆ ಅಣ್ಣಾಮಲೈಗೆ ಅಧ್ಯಾತ್ಮದ ಕಿಚ್ಚು ಹತ್ತಿರಬಹುದು, ಆದರೆ ದ್ರಾವಿಡ ರಾಜಕಾರಣದ ಚದುರಂಗದಾಟದಲ್ಲಿ ಇವರು ಒಂಟಿ ಸಿಂಹವಾಗಿಯೇ ಉಳಿದುಬಿಟ್ಟರು. ತಮಿಳುನಾಡು ಬಿಜೆಪಿಯ ಅಧ್ಯಕ್ಷ ಪಟ್ಟ ಅತೀ ಕಿರಿಯ ವಯಸ್ಸಿನಲ್ಲೇ ಸಿಕ್ಕಿದ್ದು ಇವರ ಅದೃಷ್ಟವಿರಬಹುದು, ಆದರೆ ಅದೇ ಅಧ್ಯಕ್ಷ ಗಿರಿ ಇವರ ಅಹಂಕಾರದ ಬಿಂಬವಾಗಿ ಬದಲಾಯ್ತು ಎನ್ನುವುದು ಈಗಿನ ವಿಶ್ಲೇಷಣೆ. ಅಣ್ಣಾಮಲೈ ಅಬ್ಬರಿಸಿದರು, ʻಎನ್ ಮನ್, ಎನ್ ಮಕ್ಕಲ್’ ಅಂತ ಇಡೀ ತಮಿಳುನಾಡು ಸುತ್ತಿದರು. ಆದರೆ ವೋಟ್ ಬ್ಯಾಂಕ್ ಎಂಬ ಮಾಯಾವಿ ಇವರ ಕೈಗೆ ಸಿಗಲೇ ಇಲ್ಲ.

ಎಡಪ್ಪಾಡಿ ಎಸೆದ ದಾಳ; ಅಣ್ಣಾಮಲೈ ಸ್ಥಾನಕ್ಕೆ ಹೊಡೆತ!
ರಾಜಕಾರಣದಲ್ಲಿ ಗೆಳೆತನಕ್ಕಿಂತ ಮೈತ್ರಿ ಮುಖ್ಯ. ಇಪಿಎಸ್ (ಎಡಪ್ಪಾಡಿ ಕೆ. ಪಳನಿಸ್ವಾಮಿ) ಅವರ ಎಐಎಡಿಎಂಕೆಯೊಂದಿಗೆ ಬಿಜೆಪಿ ದೋಸ್ತಿ ಮಾಡಿಕೊಳ್ಳಬೇಕೆಂದರೆ ಅಣ್ಣಾಮಲೈ ಅಡ್ಡಗಾಲು ಇರಬಾರದಿತ್ತು. ಪಳನಿಸ್ವಾಮಿ ದೆಹಲಿ ಮಟ್ಟದಲ್ಲಿ ಒತ್ತಡ ಹೇರಿ ಈ ಸಿಂಗಂನನ್ನ ಪಟ್ಟದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಗೌಂಡರ್ ಸಮುದಾಯದ ಇಬ್ಬರು ನಾಯಕರ ನಡುವಿನ ಈ ಶೀತಲ ಸಮರದಲ್ಲಿ ಅಣ್ಣಾಮಲೈ ಸದ್ಯಕ್ಕೆ ಮಕಾಡೆ ಮಲಗಿದ್ದಾರೆ.
ಅಣ್ಣಾಮಲೈ ಈಗ ಎಲ್ಲಿ?
ಮಾರ್ಚ್ 2025ರಲ್ಲಿ ಅಧ್ಯಕ್ಷ ಸ್ಥಾನ ಹೋಯ್ತು. ಮೊನ್ನೆ ಫೆಬ್ರವರಿ 3ರಂದು ತಂದೆಯ ಅನಾರೋಗ್ಯದ ನೆಪವೊಡ್ಡಿ ಚುನಾವಣಾ ಜವಾಬ್ದಾರಿಯಿಂದ ಹಿಂದೆ ಸರಿದರು. ಫೆಬ್ರವರಿ 11ರ ಸಮಿತಿಯಲ್ಲೂ ಇವರ ಹೆಸರಿಲ್ಲ. ಅಂದರೆ, ದೆಹಲಿಯ ದೊರೆಗಳು ಅಣ್ಣಾಮಲೈ ಅವರನ್ನ ಸೈಡ್ ಲೈನ್ ಮಾಡಿದ್ದಾರಾ? ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದಷ್ಟು ಇಂಪ್ಯಾಕ್ಟ್ ನೆಲದ ಮೇಲೆ ಬೀಳುತ್ತಿಲ್ಲ ಎಂದು ಹೈಕಮಾಂಡ್ ಅಂದುಕೊಂಡಿದೆಯಾ?

41 ವರ್ಷದ ಅಣ್ಣಾಮಲೈಗೆ ಇನ್ನೂ ವಯಸ್ಸಿದೆ. ಆದರೆ ರಾಜಕೀಯದಲ್ಲಿ ಒಮ್ಮೆ ಕಾಲು ಜಾರಿದರೆ ಮತ್ತೆ ಮೇಲೆ ಏಳೋದು ಸುಲಭದ ಮಾತಲ್ಲ. ಹೊಸ ಪಕ್ಷ ಕಟ್ಟುವ ತಾಕತ್ತು ಇವರಲ್ಲಿದೆಯಾ? ಅಥವಾ ಮತ್ತೆ ಬಿಜೆಪಿಯಲ್ಲಿ ಯಾವುದೋ ‘ಮ್ಯಾಜಿಕ್’ ಹುದ್ದೆ ಇವರಿಗಾಗಿ ಕಾಯುತ್ತಿದೆಯಾ ಕನ್ನಡಿಗರು ಮೆಚ್ಚಿದ್ದ ಈ ಮಣ್ಣಿನ ಮಗ, ತಮಿಳು ಮಣ್ಣಿನಲ್ಲಿ ಅಧಿಕಾರದ ಕಹಳೆ ಊದುತ್ತಾರಾ ಅಥವಾ ರಾಜಕೀಯದ ಅರಣ್ಯದಲ್ಲಿ ದಾರಿ ತಪ್ಪಿದ ವನ್ಯಜೀವಿಯಂತೆ ಉಳಿದುಬಿಡುತ್ತಾರಾ? ಕಾಲವೇ ಉತ್ತರ ನೀಡಬೇಕು!