ಉಡುಪಿ: ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ತನ್ನ ಅಸಲಿ ಆಟ ಆರಂಭಿಸಿದ್ದಾರೆ. 2023ರ ಡಿಸೆಂಬರ್‌ನಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣದ ಹಿಂದಿರುವ ಭೂಗತ ಪಾತಕಿ ಕಲಿ ಯೋಗೀಶ ಹಾಗೂ ಆತನ ಆಪ್ತ ಯೋಗೀಶ ಆಚಾರ್ಯ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ (COCA – ಸೆಕ್ಷನ್ 3) ಅಡಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಲಾಗಿದೆ.

ಈ ಪ್ರಕರಣದಲ್ಲಿ ಕೋಕಾ ಕಾಯಿದೆಯಡಿ ಜಾಮೀನಿನ ಮೇಲೆ ಹೊರಬಂದಿದ್ದ ಕೋಟೆ ತೌಡಬೆಟ್ಟುವಿನ ಯೋಗೀಶ ಆಚಾರ್ಯ (54) ಇದೀಗ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇತ್ತ, ಕೊಲೆ ಕೇಸ್‌ನ ಮಾಸ್ಟರ್‌ಮೈಂಡ್ ಕಲಿ ಯೋಗೀಶ ವಿದೇಶದಲ್ಲಿಯೇ ತಲೆಮರೆಸಿಕೊಂಡಿದ್ದು, ಆತನನ್ನು ವಿದೇಶದಿಂದ ಭಾರತಕ್ಕೆ ಕರೆತರಲು ಪೊಲೀಸರು ಇನ್ನಿಲ್ಲದ ಪ್ರಯತ್ನ ಆರಂಭಿಸಿದ್ದಾರೆ.
ಜಾಗದ ತಕರಾರು ಹಲ್ಲೆ, ಕೊಲೆ!
2022ರ ಡಿಸೆಂಬರ್‌ನಲ್ಲಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾಗಿರುವ ಯೋಗೀಶ ಆಚಾರ್ಯ ಹಾಗೂ ಆತನ ಗ್ಯಾಂಗ್, ಜಾಗದ ತಕರಾರು ವಿಚಾರದಲ್ಲಿ ಚಂದ್ರಶೇಖರ ಮತ್ತು ಇತರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಹಲ್ಲೆ ಪ್ರಕರಣದ ನಂತರ, 2023ರ ಮಾರ್ಚ್‌ನಲ್ಲಿ ನಡೆದ ಬೆಳವಣಿಗೆಯಲ್ಲಿ, ಶರತ್ ಶೆಟ್ಟಿ ಆರೋಪಿ ಯೋಗೀಶ ಆಚಾರ್ಯನ ಪರ ನಿಲ್ಲದೆ ಚಂದ್ರಶೇಖರಗೆ ಬೆಂಬಲ ನೀಡಿದ್ದನು. ಈ ‘ದ್ರೋಹ’ವೇ ಶರತ್ ಶೆಟ್ಟಿಯ ಜೀವಕ್ಕೆ ಅಪಾಯವಾಗಿ ಪರಿಣಮಿಸಿತು.

ಭೂಗತ ಪಾತಕಿ ಕಲಿ ಯೋಗೀಶನ ಸೂಚನೆಯ ಮೇರೆಗೆ, ಯೋಗೀಶ ಆಚಾರ್ಯ ಮತ್ತು ಆತನ ಸಹಚರರು ಶರತ್ ಶೆಟ್ಟಿಯನ್ನು ನಿರ್ದಯವಾಗಿ ಕೊಲೆ ಮಾಡಿದ್ದರು. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಕೊಲೆ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆಯ ವೇಳೆ ಭೂಗತ ಜಗತ್ತಿನ ಭಯಾನಕ ಜಾಲವೊಂದು ಬಹಿರಂಗವಾಗಿದೆ.
ಸಾಕ್ಷಿದಾರನಿಗೆ ಕೊಲೆ ಬೆದರಿಕೆ!
ಇದೇ ಪ್ರಕರಣದ ಪ್ರಮುಖ ಸಾಕ್ಷಿದಾರ ಚಂದ್ರಶೇಖರ್ ಶೆಟ್ಟಿಗೆ 2025ರ ಅಕ್ಟೋಬರ್ 20ರ ರಾತ್ರಿ ಯೋಗೀಶ್ ಆಚಾರ್ಯ ಕರೆ ಮಾಡಿ, “ನಮ್ಮ ವಿರುದ್ಧ ಸಾಕ್ಷಿ ಕೊಡಬೇಡ, ಕೇಸ್ ರಾಜಿ ಮಾಡಿಕೊ, ಹಳೆಯ ಹಣದ ವಿಚಾರ ಸೆಟಲ್ ಮಾಡು” ಎಂದು ಬೆದರಿಕೆ ಹಾಕಿದ್ದ. ಮಾತು ಕೇಳದಿದ್ದರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಆರೋಪಿಸಲಾಗಿತ್ತು.

ಕೋಕಾ ಕಾಯ್ದೆಯಡಿ ಮತ್ತೆ ಅರೆಸ್ಟ್!
ಈ ಬೆದರಿಕೆ ಪ್ರಕರಣದ ಬೆನ್ನಲ್ಲೇ ಪೊಲೀಸರು ಯೋಗೀಶ ಆಚಾರ್ಯನನ್ನು ಅ.24ರಂದು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದರೂ, ಪ್ರಕರಣದ ಗಂಭೀರತೆಯನ್ನು ಗಮನಿಸಿ ಕಾರ್ಕಳ ಎಎಸ್ಪಿ ಡಾ. ಹರ್ಷ ಪ್ರಿಯಂವದಾ ನೇತೃತ್ವದ ತಂಡ ಮತ್ತೆ ಆತನನ್ನು ಬಂಧಿಸಿದೆ. ಆರೋಪಿಯನ್ನು ಮೈಸೂರಿನ ಪ್ರಿನ್ಸಿಪಲ್ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ವಿಶೇಷ (ಕೋಕಾ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಲಿ ಯೋಗೀಶಗೆ ಲುಕ್‌ಔಟ್ ನೋಟಿಸ್!
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಲಿ ಯೋಗೀಶ ವಿರುದ್ಧ ಲುಕ್‌ಔಟ್ ನೋಟಿಸ್ ಸೇರಿ ಕಠಿಣ ಕ್ರಮಕ್ಕೆ ಪೊಲೀಸರು ಸಜ್ಜಾಗಿದ್ದಾರೆ.