ಗ್ಯಾಸ್ ಸೋರಿಕೆ; ಬೆಂಕಿಗೆ ಸುಟ್ಟು ಭಸ್ಮವಾದ ಅಂಗಡಿ

ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಗೊಂಡು ಅಂಗಡಿ ಪೂರ್ತಿ ಬೆಂಕಿಗೆ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ಮೊದಲ ಮಹಡಿಯ ಮೊಹಮ್ಮದ್ ಸಮೀಲ್ ಎಂಬವರ ಮಾಲೀಕತ್ವದ KAF ಕ್ರಿಯೇಟಿವ್ ಅರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಇಬ್ಬರು ಕೆಲಸದವರು ಫೆ.14 ರಂದು ಬೆಳಗ್ಗೆ 7:30 ಕ್ಕೆ ಕಾರ್ಯಕ್ರಮವೊಂದಕ್ಕೆ ಬಲೂನ್ ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಉಂಟಾಗಿ ಸಂಪೂರ್ಣ ಸುಟ್ಟು ಹೋಗಿದೆ.

ಘಟನೆ ವೇಳೆ ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿ ಕೆನ್ನಲಿಗೆ ಅಕ್ಕಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ. ಗ್ಯಾಸ್ ಸೋರಿಕೆಯಿಂದ ಯಾವುದೇ ದೊಡ್ಡ ಅನಾಹುತ ಉಂಟಾಗಿಲ್ಲ.

ಘಟನೆಯನ್ನು ನೋಡಲು ನೂರಾರು ಮಂದಿ ಜಾಮಾಯಿಸಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ತಕ್ಷಣ ಬೆಳ್ತಂಗಡಿ ಪೊಲೀಸರು ಮತ್ತು ಸಂಚಾರಿ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದೆ ವೇಳೆ ಬೆಂಕಿ ಹೊತ್ತುವ ಘಟನೆಯನ್ನು ನೋಡುತ್ತಿದ್ದ ಶಾಪ್ ಕೆಲಸದಾಕೆ ಮೂರ್ಛೆ ಹೋದ ಘಟನೆ ನಡೆಯಿತು ಬಳಿಕ ಸ್ಥಳೀಯರೆಲ್ಲ ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!