ಮಂಗಳೂರು: ದ್ವಿಚಕ್ರವಾಹನದಲ್ಲಿ ಗೋಮಾಂಸ ಸಾಗಾಟದ ಆರೋಪದಲ್ಲಿ ಯುವಕರ ತಂಡವೊಂದು ತಂದೆ-ಮಗಳನ್ನು ತಡೆದು ನಿಲ್ಲಿಸಿದ ಪ್ರಕರಣದ ಕುರಿತಂತೆ ಕಮೀಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದು, ಪ್ರಕರಣದ ಸತ್ಯಾಸತ್ಯತೆಯನ್ನು ವಿವರಿಸಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ, ಅಬ್ದುಲ್ ಸತ್ತಾರ್ ಮುಲ್ಲರಪಟ್ನ ಎಂಬವರು ತಮ್ಮ 11 ವರ್ಷದ ಮಗಳೊಂದಿಗೆ ಸುಮಾರು 19 ಕೆ.ಜಿ ತೂಕದ ಗೋಮಾಂಸವನ್ನು ಯಾವುದೇ ದಾಖಲೆಗಳಿಲ್ಲದೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ–ನಾರ್ಲಪದವು ರಸ್ತೆಯಲ್ಲಿ ತಂಡವೊಂದು ತಡೆದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಎಡಪದವುವಿನ ನಿವಾಸಿಗಳಾದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯಕ್ (30) ಅವರು ಟಾಟಾ ಸುಮೋ ವಾಹನದಲ್ಲಿ ಬಂದು ಸತ್ತಾರ್ ಅವರ ಬೈಕಿಗೆ ಅಡ್ಡಗಟ್ಟಿದ್ದಾರೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ, ಸೈಲೆನ್ಸರ್‌ನಿಂದ ಬಾಲಕಿಯ ಕಾಲಿಗೆ ಸುಟ್ಟ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ಸತ್ತಾರ್ ಅವರು ಬೈಕ್‌ನ್ನು ಅಲ್ಲೇ ಬಿಟ್ಟು ಓಡಿಹೋದರೆಂದು ಹೇಳಲಾಗಿದ್ದು, ಸ್ಥಳೀಯರು ಗಾಯಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಸುಮಿತ್ ಭಂಡಾರಿ ಹಾಗೂ ರಜತ್ ನಾಯಕ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡು, ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ರಜತ್ ನಾಯಕ್ ತಾನು ವೈದ್ಯಕೀಯ ಪ್ರತಿನಿಧಿಯಾಗಿದ್ದು, ಮಹರ್ಷಿ ಚಿಕಿತ್ಸಾಲಯಕ್ಕೆ ಔಷಧಿ ನೀಡಲು ಹೋಗುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಪರಿಶೀಲನೆ ನಡೆಸಿದ ಪೊಲೀಸರು, ಸಂಬಂಧಿತ ಆಸ್ಪತ್ರೆಯಲ್ಲಿ ಯಾವುದೇ ಔಷಧಿ ತಲುಪಿಲ್ಲ ಎಂದು ಅಲ್ಲಿನ ವೈದ್ಯರಿಂದ ಸ್ಪಷ್ಟಪಡಿಸಿದ್ದಾರೆ.
ಇನ್ನು, ಇಬ್ಬರೂ ತಾವು ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದು, ಪ್ರತ್ಯೇಕವಾಗಿ ಪ್ರಶ್ನಿಸಿದಾಗ ಯಾವ ದೇವಸ್ಥಾನಕ್ಕೆ ಹೋಗಬೇಕೆಂಬುದನ್ನು ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಗಾಯಗೊಂಡ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ತನ್ನ ತಂದೆಯನ್ನು ತಡೆದು ಕೈಗಳಿಂದ ಹೊಡೆದಿದ್ದಾರೆ ಎಂದು ಆಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಬಿಲ್ ಇಲ್ಲದೆ ಗೋಮಾಂಸ ಸಾಗಣೆ ಮಾಡಿದ್ದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗುತ್ತಿದ್ದು, ಘಟನೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ಸುಮಿತ್ ಭಂಡಾರಿ ಮತ್ತು ರಜತ್ ನಾಯಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದಾಗಿ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಕಮೀಷನರ್ ತನಿಖೆಯಲ್ಲಿ ಬೆಳಕಿಗೆ ಬಂದಿದ್ದೇನು?

ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಮಾಂಸ ಸಾಗಣೆ ಹಾಗೂ ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಸಂಬಂಧಿಸಿದ ಘಟನೆಯ ಬಗ್ಗೆ ಇದುವರೆಗೆ ನಡೆದ ವಿಚಾರಣೆ ಮತ್ತು ಲಭ್ಯವಾದ ಮಾಹಿತಿಯ ಆಧಾರದಲ್ಲಿ ಕೆಲವು ಪ್ರಮುಖ ಅಂಶಗಳು ಬೆಳಕಿಗೆ ಬಂದ್ದಾಗಿ ಕಮೀಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಅವರ ಮಾಹಿತಿ ಪ್ರಕಾರ, ಅಬ್ದುಲ್ ಸತ್ತಾರ್ ಅವರು ಈ ಪ್ರದೇಶದಲ್ಲಿ ನಿಯಮಿತವಾಗಿ ಗೋಮಾಂಸವನ್ನು ತಲುಪಿಸುತ್ತಿದ್ದರು ಎನ್ನಲಾಗಿದೆ. ವಶಕ್ಕೆ ಪಡೆಯಲಾದ ಸುಮಾರು 19 ಕೆಜಿ ತೂಕದ ಗೋಮಾಂಸವನ್ನು 35 ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಘಟನೆಯ ವೇಳೆ ಸುಮಿತ್ ಭಂಡಾರಿ ಮತ್ತು ರಜತ್ ನಾಯಕ್ ಅವರು ಸತ್ತಾರ್ ಅವರ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದಾಗಿ ಹೇಳಲಾಗಿದ್ದು, ಬೈಕ್ ಕೆಳಗೆ ಬಿದ್ದಾಗ ಅಥವಾ ಸೈಲೆನ್ಸರ್ ತಗುಲಿದ ಪರಿಣಾಮ ಅಪ್ರಾಪ್ತ ಬಾಲಕಿಯ ಕಾಲಿಗೆ ಸುಟ್ಟ ಗಾಯವಾಗಿದೆ.
ತಂದೆ–ಮಗಳ ಮೇಲೆ ನೇರವಾಗಿ ಹಲ್ಲೆ ನಡೆದಿದೆಯೇ ಎಂಬುದು ಮತ್ತು ಹಲ್ಲೆಯ ಸ್ವರೂಪ ಏನು ಎಂಬುದನ್ನು ಇನ್ನೂ ದೃಢಪಡಿಸಬೇಕಿದ್ದು, ಈ ಕುರಿತು ತನಿಖೆ ಮುಂದುವರಿದಿದೆ ಎಂದು ಕಮೀಷನರ್ ತಿಳಿಸಿದ್ದಾರೆ.
ಯಾವುದೇ ಬಿಲ್ ಅಥವಾ ದಾಖಲೆಗಳಿಲ್ಲದೆ ಅಧಿಕೃತವಲ್ಲದ ಮೂಲದಿಂದ ಗೋಮಾಂಸ ಸಾಗಣೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗೋಮಾಂಸ ಸಾಗಣೆ ಪ್ರಕರಣವನ್ನು ಪ್ರತ್ಯೇಕವಾಗಿ ದಾಖಲಿಸಲಾಗುತ್ತಿದೆ. ಇದರ ಜೊತೆಗೆ, ನೈತಿಕ ಪೊಲೀಸ್‌ಗಿರಿ ಆರೋಪಕ್ಕೂ ಸಂಬಂಧಿಸಿದಂತೆ ಸುಮಿತ್ ಮತ್ತು ರಜತ್ ವಿರುದ್ಧವೂ ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಸತ್ತಾರ್ ಅವರನ್ನು ವಶಕ್ಕೆ ಪಡೆದ ನಂತರ ಅವರು ಗೋಮಾಂಸವನ್ನು ಎಲ್ಲಿಂದ ತರುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ತಿಳಿಯಲಿದೆ. ಈ ಪ್ರಕರಣದಲ್ಲಿ ಅವಿನಾಶ್ ಸುವರ್ಣ ಎಂಬ ವ್ಯಕ್ತಿಯ ಯಾವುದೇ ಪಾತ್ರ ಅಥವಾ ಒಳಗೊಳ್ಳುವಿಕೆ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ . ತನಿಖೆಯ ನಂತರ ಅವರು ಪ್ರಕರಣಕ್ಕೆ ಸಂಬಂಧಪಟ್ಟಿಲ್ಲ ಎಂದು ಕಂಡುಬಂದರೆ, ತಪ್ಪು ಮಾಹಿತಿ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಸುಧೀರ್ ರೆಡ್ಡಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳಿಗೆ ಕಾರಣವಾಗಿದ್ದು, ಪೊಲೀಸರ ಸ್ಪಷ್ಟ ಮಾಹಿತಿಯಿಂದ ಪ್ರಕರಣದ ಅಸಲಿಯತ್ ಬಯಲಾಗಿದೆ.
