‌ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಸಾರಥ್ಯದ 9ನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಅದ್ಧೂರಿ ಚಾಲನೆ

ಮಂಗಳೂರು: ಕರಾವಳಿಯ ಸಂಸ್ಕೃತಿ, ಪರಂಪರೆ ಹಾಗೂ ಜಾನಪದ ಕ್ರೀಡಾ ವೈಭವಕ್ಕೆ ಪ್ರತೀಕವಾದ, ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ 9ನೇ ವರ್ಷದ ಮಂಗಳೂರು ಕಂಬಳ ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ–ಲಕ್ಷ್ಮಣ ಜೋಡುಕರೆಯಲ್ಲಿ ಭಾರೀ ಜನಸಾಗರದ ನಡುವೆ ಅದ್ಧೂರಿಯಾಗಿ ಆರಂಭಗೊಂಡಿತು.

ಕಂಬಳ ಕೇವಲ ಕ್ರೀಡೆಯಲ್ಲ; ತುಳುನಾಡಿನ ಜೀವಂತ ಸಂಸ್ಕೃತಿ: ಕ್ಯಾಪ್ಟನ್ ಬ್ರಿಜೇಶ್ ಚೌಟ

ಈ ಸಂದರ್ಭದದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ, ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ,  ಮಂಗಳೂರು ಕಂಬಳವು ಕೇವಲ ಕ್ರೀಡಾಕೂಟವಷ್ಟೇ ಅಲ್ಲ, ಅದು ತುಳುನಾಡಿನ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಯ ರೋಮಾಂಚಕ ಆಚರಣೆಯಾಗಿದ್ದು, ಭೂಮಿ, ಅದರ ಜನರು ಹಾಗೂ ಅವರ ಪ್ರಾಚೀನ ಪದ್ಧತಿಗಳ ನಡುವಿನ ಆಳವಾದ ಬಾಂಧವ್ಯವನ್ನು ಸಂಕೇತಿಸುತ್ತದೆ ಎಂದರು.

ಸ್ಥಳೀಯ ಜಾನಪದ ಕ್ರೀಡೆಗಳನ್ನು ಸಂರಕ್ಷಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತಾ, ಇಂತಹ ಕ್ರೀಡೆಗಳ ಮೂಲಕವೇ ನಮ್ಮ ಮೂಲ ಸಂಸ್ಕೃತಿ ಮುಂದಿನ ಪೀಳಿಗೆಗಳಿಗೆ ತಲುಪುತ್ತದೆ ಎಂದರು. ಈ ವರ್ಷದ ಮಂಗಳೂರು ಕಂಬಳದ ವಿಷಯವಾದ ‘ನವ ವಿಧ – ನವ ವರ್ಷದ ಮಂಗಳೂರು ಕಂಬಳ’ ಅನ್ನು ಉಲ್ಲೇಖಿಸಿದ ಕ್ಯಾಪ್ಟನ್ ಚೌಟ, 2025ರ ಆವೃತ್ತಿಯು ವಿಶೇಷ ಮಹತ್ವವನ್ನು ಹೊಂದಿದೆ ಎಂದು ಹೇಳಿದರು. ತುಳುನಾಡಿನ ಮೇಲಿನ ಅಪಾರ ಪ್ರೀತಿ ಹಾಗೂ ಬಾಂಧವ್ಯದಿಂದ ಪ್ರೇರಿತರಾಗಿ, ಅನೇಕ ಯುವ ಸಾಧಕ ಉದ್ಯಮಿಗಳು ತಮ್ಮ ಸ್ಥಳೀಯ ನೆಲೆಗೆ ಮರಳಿದ್ದು, ಪ್ರಾದೇಶಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಜೊತೆಗೆ ಯಶಸ್ವಿ ಉದ್ಯಮಗಳನ್ನು ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.

ಬೆಳಿಗ್ಗೆ 8.30ಕ್ಕೆ ಕಂಕನಾಡಿ ಶ್ರೀಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಕೆ. ಚಿತ್ತರಂಜನ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಂಬಳಕ್ಕೆ ಅಧಿಕೃತ ಚಾಲನೆ ನೀಡಿದರು. ಕಟೀಲು ಕ್ಷೇತ್ರದ ಅರ್ಚಕ ಅನಂತಪದ್ಮನಾಭ ಅಸ್ರಣ್ಣರು ತೆಂಗಿನ ಕೊಂಬು ಅರಳಿಸುವ ಮೂಲಕ ಜೋಡುಕರೆಯಲ್ಲಿ ಕಂಬಳ ಕೋಣಗಳ ಓಟಕ್ಕೆ ಅಧಿಕೃತ ಮುದ್ರೆ ಒತ್ತಿದರು. ಕಂಬಳ ಕಣದಲ್ಲಿ ಕೋಣಗಳ ಓಟದೊಂದಿಗೆ ಪ್ರೇಕ್ಷಕರ ಸಂಭ್ರಮ, ಜೈಕಾರಗಳ ಘೋಷ ಹಾಗೂ ಸಂಸ್ಕೃತಿಯ ಛಾಪು ಮೇಳೈಸಿ ಕಂಬಳ ಮೈದಾನವೇ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು.

ಪರಿಸರ ಸ್ನೇಹಿ ಪರಿಕಲ್ಪನೆಯಡಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ‘ಕ್ಲೀನ್ ಅಂಡ್ ಸೇಫ್ ಸಿಟಿ’ ಶಿಸ್ತನ್ನು ಕಂಬಳ ವೇದಿಕೆಯಲ್ಲೂ ಅಳವಡಿಸಲಾಯಿತು. ಈ ಬಾರಿ ಸುಮಾರು 160ರಿಂದ 170 ಜತೆ ಕೋಣಗಳು ಕಂಬಳ ಕಣದಲ್ಲಿ ಪೈಪೋಟಿ ನಡೆಸುತ್ತಿದ್ದು, ರಾತ್ರಿಯ ವೇಳೆಗೆ ಗೆಲ್ಲುವ ಕೋಣಗಳ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.

ಈ ಕಾರ್ಯಕ್ರಮವು ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಗೌರವ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.

ನವ ವರ್ಷ–ನವ ವಿಧ ಪರಿಕಲ್ಪನೆಯಡಿ ರಾಣಿ ಅಬ್ಬಕ್ಕ ಚರಿತ್ರಾ ಚಿತ್ರಕಲಾ ಪ್ರದರ್ಶನ, ವಂದೇ ಮಾತರಂ ಗೀತೆಯ 150ನೇ ವರ್ಷದ ಸವಿನೆನಪು, ‘ಏಕ್ ಪೆಡ್ ಮಾ ಕೆ ನಾಮ್’ ಗಿಡ ವಿತರಣೆ, ‘ಬ್ಯಾಕ್ ಟು ಊರು’ ಉದ್ಯಮಿಗಳಿಗೆ ಗೌರವ, ಹಿರಿಯ ಚೇತನರಿಗೆ ಕಂಬಳ ವೀಕ್ಷಣೆ, ಮಕ್ಕಳ ಹಾಗೂ ಯುವಕರಿಗೆ ವಿವಿಧ ಸ್ಪರ್ಧೆಗಳು ಕಂಬಳದ ವೈಶಿಷ್ಟ್ಯವಾಗಿದೆ.

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಕೆಂಗಿನಮನೆ, ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೋಡಿಕಲ್, ಸಂಜಯ್ ಪ್ರಭು, ಜೋಯಲೆಸ್ ಡಿಸೋಜ, ವಸಂತ್ ಜೆ. ಪೂಜಾರಿ, ನಂದನ್ ಮಲ್ಯ, ಅಜಿತ್ ಬೋಪಯ್ಯ, ಗುರುಚಂದ್ರ ಹೆಗಡೆ, ಅಭಿಷೇಕ್ ರೈ, ಈಶ್ವರ್ ಪ್ರಸಾದ್, ಸಾಕ್ಷತ್ ಶೆಟ್ಟಿ, ಪ್ರಕಾಶ್ ಗರೋಡಿ, ಸಂಚಾಲಕರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಕಾರ್ಯದರ್ಶಿ ಅವಿನಾಶ್ ಸುವರ್ಣ, ಸುಜಿತ್ ಪ್ರತಾಪ್ ಸೇರಿದಂತೆ ಕಂಬಳ ಸಮಿತಿಯ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಅಪಾರ ಸಂಖ್ಯೆಯ ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.

ಬಹುಮಾನ ವಿತರಣಾ ಸಮಾರಂಭವು ಡಿಸೆಂಬರ್ 28 ರ ಭಾನುವಾರ ಬೆಳಿಗ್ಗೆ ನಡೆಯಲಿದೆ.

error: Content is protected !!