ಮಂಗಳೂರು: ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ನಿಯಮಿತವಾಗಿ ನಡೆಯುವ ಶೈಕ್ಷಣಿಕ ಸ್ಪರ್ಧಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಇಂತಹ ಸ್ಪರ್ಧಾಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರಥಮ ಆದ್ಯತೆ ಹಾಗೂ ಗುರಿಯಾಗಿ ಪರಿಗಣಿಸಬೇಕು. ಸೋಲು–ಗೆಲುವು ದ್ವಿತೀಯ ಉದ್ದೇಶವಾಗಿರಲಿ. ಇದರಿಂದ ಭವಿಷ್ಯದ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಶಹನವಾಜ್ ಮಣಿಪಾಡಿ ಹೇಳಿದರು.

ದೇರಳಕಟ್ಟೆ ನಾಟೆಕಲ್‌ನ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ವೈದ್ಯಕೀಯ ಶಾಸ್ತ್ರ ವಿಭಾಗದ ಪದವಿ ಪೂರ್ವ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 5ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ್ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ ‘ಕಿಮ್ಸ್ ಯು.ಜಿ. ಮೆಡಿಕ್ವಿಜ್–2025’ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ಪರ್ಧಾಕೂಟದಲ್ಲಿ ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ನೌಶೀನ್ ಮತ್ತು ಅಹಾದ್ ಜೋಡಿ ತಂಡವು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಯೆನೆಪೋಯ ವೈದ್ಯಕೀಯ ಕಾಲೇಜಿನ ಸೂರ್ಯ ಶ್ರೀಧರನ್ ಮತ್ತು ಅತೀಫ್ ಸತ್ತಾರ್ ಜೋಡಿ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡರೆ, ಕಣಚೂರು ವೈದ್ಯಕೀಯ ಕಾಲೇಜಿನ ಮಾಲಿಕ್ ರೆಹಾನ್ ಮತ್ತು ಶೇಖ್ ಅಫಿಝುಲ್ಲಾ ತಂಡವು ತೃತೀಯ ಸ್ಥಾನ ಗಳಿಸಿತು.

ಪ್ರಾಂಶುಪಾಲ ಡಾ. ಶಹನವಾಜ್ ಮಣಿಪಾಡಿ ಅವರು ವಿಜೇತ ತಂಡಗಳಿಗೆ ಪ್ರಶಸ್ತಿ, ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಕುಮಾರ್, ಕಣಚೂರು ಆರೋಗ್ಯ ಮತ್ತು ವಿಜ್ಞಾನ ಸಲಹಾ ಸಮಿತಿ ಸದಸ್ಯ ಡಾ. ಎಂ.ವಿ. ಪ್ರಭು ಉಪಸ್ಥಿತರಿದ್ದರು. ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ರೈ ಸ್ಪರ್ಧಾಕೂಟದ ನಿರೂಪಣೆಯನ್ನು ವಹಿಸಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜುಗಳಿಂದ ಒಟ್ಟು 60 ತಂಡಗಳು ನಿರ್ಣಾಯಕ ಹಾಗೂ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.
ಕಾರ್ಯಕ್ರಮದಲ್ಲಿ ಡಾ. ದೇವದಾಸ್ ರೈ ಸ್ವಾಗತಿಸಿ, ಡಾ. ಅಬ್ದುಲ್ ಕರೀಮ್ ಫಾರುಖಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ಪರ್ಧಾಕೂಟವನ್ನು ಡಾ. ಪ್ರೀತಮ್ ಸಂಘಟಿಸಿದ್ದು, ವಿಜೇತರಿಗೆ ನೀಡಲಾದ ಬಹುಮಾನಗಳನ್ನು ಎಂ.ವಿ. ಮಲ್ಯ ಅವರು ಪ್ರಾಯೋಜಿಸಿದ್ದರು.