ಹೆಜಮಾಡಿ ನೇಮದ ವೇಳೆ ಚಿನ್ನದ ಸರ ಕಳವು: ಸಿಕ್ಕಿಬಿದ್ದ ಖತರ್ನಾಕ್‌ ಕಳ್ಳಿಯರು

ಶೀಥಲ್, ಕಾಳಿಯಮ್ಮ ಹಾಗೂ ಮಾರಿ ಬಂಧಿತ ಆರೋಪಿಗಳು

ಉಡುಪಿ: ಹೆಜಮಾಡಿ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮದ ಸಂದರ್ಭ ವೃದ್ಧೆಯ ಚಿನ್ನದ ಸರ ಕಳವು ಮಾಡಿದ ಕಳ್ಳಿಯರ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ಪಡುಬಿದ್ರೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ ಬಂಧಿತ ಆರೋಪಿಗಳು.

ಹೆಜಮಾಡಿಯ ಕಮಲ(78) ಎಂಬವರು ಡಿ.24ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮ ನೋಡಲು ಹೋಗಿದ್ದರು. ಇದೇ ಸಂದರ್ಭದಲ್ಲಿ ಶಾರದಾ ಪೂಜಾರಿ ಎಂಬವರು ಕಮಲ ಅವರ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದಿರುವುದನ್ನು ಗಮನಿಸಿ ಅವರಿಗೆ ಈ ಬಗ್ಗೆ ತಿಳಿಸಿದರು.

ಡಿ.25ರಂದು ಸಂಜೆ ದೇವಸ್ಥಾನದ ಆಡಳಿತ ಮಂಡಳಿಯವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮೂರು ಅಪರಿಚಿತ ಮಹಿಳೆಯರು ಕಮಲ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನಕ್ಕೆ ಬಾರದಂತೆ ಉಪಾಯವಾಗಿ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ಚಿನ್ನದ ಸರವನ್ನು ಲಪಟಾಯಿಸಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು..

ಸಿಸಿ ಕ್ಯಾಮರಾ ದೃಶ್ಯಗಳನ್ನು ಗಮನಿಸಿ ತನಿಖೆ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ಪುತ್ತೂರಿನಲ್ಲಿ ಬಂಧಿಸಿದ್ದಾರೆ. ಇವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಹೆಚ್ಟಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

 

error: Content is protected !!