ಮಂಜನಾಡಿ: ಜಾತಿ–ಧರ್ಮಗಳ ಗಡಿಗಳನ್ನು ಮೀರಿ ಸಾಮರಸ್ಯ, ಮಾನವೀಯತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರುವ ಮಂಜನಾಡಿ ಉರೂಸ್‌ಗೆ ಗುರುವಾರ ರಾತ್ರಿ ನಡೆದ ಭಾವನಾತ್ಮಕ ಹೊರೆಕಾಣಿಕೆ ಮೆರವಣಿಗೆ ಜೀವಂತ ಸಾಕ್ಷಿಯಾಯಿತು. ಅಸೈಗೋಳಿ ಜಂಕ್ಷನ್‌ನಿಂದ ಮಂಜನಾಡಿ ಕೇಂದ್ರ ಜುಮಾ ಮಸೀದಿ ತನಕ ಸಾಗಿದ ಮೆರವಣಿಗೆ, “ನಾವೆಲ್ಲರೂ ಒಂದೇ” ಎಂಬ ಸೌಹಾರ್ದದ ಸಂದೇಶವನ್ನು ಹೃದಯಸ್ಪರ್ಶಿಯಾಗಿ ಪ್ರತಿಬಿಂಬಿಸಿತು.

ನಿತ್ಯಾನಂದ ಸೇವಾ ಸಮಿತಿ, ಹನುಮಾನ್ ಫ್ರೆಂಡ್ಸ್, ಟೀಮ್ ಅಸೈಗೋಳಿ, ಶಕ್ತಿ ಫ್ರೆಂಡ್ಸ್, ಸ್ನೇಹ ಬಳಗ, ಓಂ ಶಕ್ತಿ, ಬರ್ಕೆ ಫ್ರೆಂಡ್ಸ್, ಬ್ರದರ್ಸ್ ಕೊಲ್ಯ ಹಾಗೂ ಸಾಯಿ ಫ್ರೆಂಡ್ಸ್ ಅಸೈಗೋಳಿ ಸೇರಿದಂತೆ ಹಲವು ಸಂಘಟನೆಗಳು ಕೈಜೋಡಿಸಿ ಉರೂಸ್‌ಗೆ ಹೊರೆಕಾಣಿಕೆ ಸಲ್ಲಿಸಿವೆ. ಧಾರ್ಮಿಕ ವೈವಿಧ್ಯತೆಯ ನಡುವೆಯೂ ಒಗ್ಗಟ್ಟಿನ ಹೃದಯಸ್ಪಂದನೆ ಮೆರವಣಿಗೆಯಲ್ಲೆಲ್ಲಾ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಸಾಯಿ ಫ್ರೆಂಡ್ಸ್ ಅಸೈಗೋಳಿ ಅಧ್ಯಕ್ಷ ಸುನಿಲ್ ಪೂಜಾರಿ ಮಾತನಾಡಿ, “ಸೌಹಾರ್ದತೆ ನಮ್ಮ ಶಕ್ತಿ. ನಾವೆಲ್ಲರೂ ಒಂದಾಗಿ ಬದುಕಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ನೀಡುತ್ತಿದ್ದೇವೆ. ಉರೂಸ್ ಯಶಸ್ಸಿಗಾಗಿ ಎಲ್ಲರೂ ಹೃದಯಪೂರ್ವಕವಾಗಿ ಶ್ರಮಿಸೋಣ” ಎಂದು ಮನಮುಟ್ಟುವಂತೆ ಹೇಳಿದರು.

ಗಣೇಶ್ ಅಸೈಗೋಳಿ ಮಾತನಾಡಿ, “ಮಂಜನಾಡಿ ಉರೂಸ್‌ಗೆ ಹೊರೆಕಾಣಿಕೆ ಸಲ್ಲಿಸುವುದು ನಮ್ಮೆಲ್ಲರಿಗೂ ಗೌರವದ ವಿಷಯ. ದೇವರು ನಮ್ಮನ್ನು ಸದಾ ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯ ದಾರಿಯಲ್ಲಿ ನಡೆಸಲಿ” ಎಂದು ಭಾವಪೂರ್ಣವಾಗಿ ಪ್ರಾರ್ಥಿಸಿದರು.
ಮಂಜನಾಡಿ ಜುಮಾ ಮಸೀದಿಯ ಅಧ್ಯಕ್ಷ ಮೈಸೂರು ಬಾವ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಹೊರೆಕಾಣಿಕೆಯನ್ನು ಸ್ವೀಕರಿಸಿ, ಎಲ್ಲ ಸಂಘಟನೆಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಡಿ.17ರಂದು ಆರಂಭಗೊಂಡ ಮಂಜನಾಡಿ ಉರೂಸ್ ಇಂದು (ಡಿ.27) ಸಮಾರೋಪಗೊಳ್ಳಲಿದ್ದು, ಶನಿವಾರ ಮಗ್ರಿಬ್ ನಮಾಝ್ ಬಳಿಕ ಭಾವೈಕ್ಯ ಸಂಗಮ ಹಾಗೂ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸೈಯದ್ ಇಬ್ರಾಹೀಂ ಖಲೀಲ್ ತಂಳ್ ಕಡಲುಂಡಿ ಹಾಗೂ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಗವಹಿಸಿ ಶಾಂತಿ–ಸೌಹಾರ್ದದ ಸಂದೇಶ ನೀಡಲಿದ್ದಾರೆ.