ಕುಂದಾಪುರ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಚಂದ್ರಬಂಡ ಗ್ರಾಮದ ಗೋಪಾಲ ಅವರಿಗೆ 150 ಗ್ರಾಂ ಚಿನ್ನ ನೀಡುವುದಾಗಿ ಹೇಳಿ 5 ಲಕ್ಷ ರೂ. ಪಡೆದು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಗಾಂಧಿನಗರ ನಿವಾಸಿ ಜಯಪ್ರಕಾಶ್ ಡಿ. ಎಂದು ಗುರುತಿಸಲಾಗಿದೆ. ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ ಈ ವಂಚನೆ ನಡೆದಿದ್ದು, ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸರು, ಚಿತ್ರದುರ್ಗದ ಕೋಟೆ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 4,50,000 ರೂ. ನಗದು ಹಾಗೂ ವಂಚನೆಗೆ ಬಳಸಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಕಾರುವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.