ನಾಳೆ ಅಡ್ಯಾರಿನಲ್ಲಿ ‘ಅಡ್ಯಾರು ಗ್ರಾಮೋತ್ಸವ’- ಸೌಹಾರ್ದಯುತ ಗ್ರಾಮ – ಸೌಹಾರ್ದಯುತ ಭಾರತ ಧ್ಯೇಯ

ಮಂಗಳೂರು: ಅಡ್ಯಾರು ಗ್ರಾಮ ಪಂಚಾಯತ್‌ನ ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಸಂಯುಕ್ತ ಆಶ್ರಯದಲ್ಲಿ ‘ಅಡ್ಯಾರು ಗ್ರಾಮೋತ್ಸವ – 2025’ ಕಾರ್ಯಕ್ರಮವು ಡಿಸೆಂಬರ್ 20ರಂದು ಸಹ್ಯಾದ್ರಿ ಕಾಲೇಜು ಮೈದಾನ, ಅಡ್ಯಾರಿನಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ.

‘ಸೌಹಾರ್ದಯುತ ಗ್ರಾಮ – ಸೌಹಾರ್ದಯುತ ಭಾರತ’ ಎಂಬ ಸಂದೇಶದೊಂದಿಗೆ ಆಯೋಜಿಸಲಾಗಿರುವ ಈ ಗ್ರಾಮೋತ್ಸವದಲ್ಲಿ ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮಸ್ಥರ ಸ್ವಸಹಾಯ ಗುಂಪುಗಳ ಮಾರಾಟ ಮಳಿಗೆಗಳು, ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿರಲಿವೆ.

ಕಾರ್ಯಕ್ರಮದ ಭಾಗವಾಗಿ ಬೆಳಿಗ್ಗೆ 9ಕ್ಕೆ ಮಕ್ಕಳ ಪಥ ಸಂಚಲನ ನಡೆಯಲಿದ್ದು, 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಡ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ *ಅಬ್ದುಲ್ ಜಲೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಅಡ್ಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಝೋಹರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಾನಪದ ನೃತ್ಯ, ಚಿತ್ರಕಲೆ ಹಾಗೂ ಸಂಗೀತ ಸ್ಪರ್ಧೆಗಳು, ಪ್ರೌಢಶಾಲಾ ವಿಭಾಗದಲ್ಲಿ ಫೋಕ್ ಡ್ಯಾನ್ಸ್, ಚಿತ್ರಕಲೆ ಮತ್ತು ಸಂಗೀತ ಸ್ಪರ್ಧೆಗಳು ನಡೆಯಲಿವೆ.

ಮಧ್ಯಾಹ್ನ 1.30ರಿಂದ 2.30ರವರೆಗೆ ಪ್ರಕೃತಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 2.30ರಿಂದ 4ರವರೆಗೆ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ.

ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮ ಹಾಗೂ ಊರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಲಿದ್ದು, ಅಡ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಐವನ್ ಡಿಸೋಜ, ಪ್ರತಾಪ್ ಸಿಂಹ ನಾಯಕ್ ಕೆ., ಮಂಜುನಾಥ ಭಂಡಾರಿ, ಧನಂಜಯ ಸರ್ಜ ಹಾಗೂ ಕಿಶೋರ್ ಬಿ.ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ತುಳು, ಕೊಂಕಣಿ, ಬ್ಯಾರಿ ಹಾಗೂ ಅರೆಭಾಷೆ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳು, ಧಾರ್ಮಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರಗಳ ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

ನಾಡಗೀತೆಯೊಂದಿಗೆ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ, ಪ್ರಾಸ್ತಾವಿಕ ನುಡಿ, ಕಾರ್ಯಕ್ರಮದ ಉದ್ಘಾಟನೆ, ಉದ್ಘಾಟಕರ ನುಡಿ, ಊರ ಸಾಧಕರಿಗೆ ಸನ್ಮಾನ, ಮುಖ್ಯ ಅತಿಥಿಗಳ ಭಾಷಣ, ವಿಶೇಷ ವರ್ಗದವರಿಗೆ ಗೌರವಧನ ವಿತರಣೆ, ಅಧ್ಯಕ್ಷರ ಭಾಷಣ ಹಾಗೂ ವಂದನಾರ್ಪಣೆ ನಡೆಯಲಿದೆ. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

ಅಡ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಕೃತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

error: Content is protected !!