ಫೆ.4-10ರವರೆಗೆ ಸಸಿಹಿತ್ಲು ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಸುರತ್ಕಲ್: ಬಿಲ್ಲವರ ಹಿತವರ್ಧಕ ಸಂಘ (ರಿ), ಸಸಿಹಿತ್ತು ಇದರ ಸಂಚಾಲನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಮಪವಿತ್ರ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ, ಸಸಿಹಿತ್ತಿನ ಜೀರ್ಣೋದ್ಧಾರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಫೆಬ್ರವರಿ 4ರಿಂದ 10ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಡಗರ ಸಂಭ್ರಮದಿಂದ ನಡೆಯಲಿದೆ.

ಸಸಿಹಿತ್ತಿನ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಸೋಮವಾರ (ಫೆ.2) ನಡೆದ ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಬಿ. ಕರ್ಕೇರ ಅವರು ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ನೀಡಿದರು. “ಬಡವರೇ ಹೆಚ್ಚಾಗಿ ವಾಸಿಸುವ ಸಸಿಹಿತ್ತು ಎಂಬ ಸಣ್ಣ ಗ್ರಾಮದಲ್ಲಿ ನಾಲ್ಕು ಕಡೆ ಸಮಾಜಗಳು ಒಂದಾಗಿ ಸುಮಾರು 3.5 ಕೋಟಿ ರೂ. ವೆಚ್ಚದ ಬೃಹತ್ ಜೀರ್ಣೋದ್ಧಾರ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಉಳ್ಳಾಯ ಹಾಗೂ ಪರಿವಾರ ಶಕ್ತಿಗಳ ಕಾರ್ಣಿಕವಿಲ್ಲದೆ ಸಾಧ್ಯವಿರಲಿಲ್ಲ” ಎಂದು ಅವರು ಹೇಳಿದರು.

ಎರಡು ವರ್ಷಗಳ ಹಿಂದೆ ಈ ಯೋಜನೆ ಆರಂಭಿಸುವಾಗ ಸಾಕಷ್ಟು ಆತಂಕ ಇತ್ತು. ದಶಕಗಳಿಂದ ಕನಸಾಗಿಯೇ ಉಳಿದಿದ್ದ ಈ ಯೋಜನೆ ಕ್ಷೇತ್ರದ ದೈವಶಕ್ತಿಗಳ ಅನುಗ್ರಹ ಹಾಗೂ ಭಕ್ತರ ಅಭಯದ ಫಲವಾಗಿ ಯಶಸ್ವಿಯಾಗಿ ಸಾಕಾರಗೊಂಡಿದೆ ಎಂದರು. “ದೈವಸ್ಥಾನ ಸಂಪೂರ್ಣ ಶಿಲಾಮಯವಾಗಬೇಕು ಎಂಬ ನಮ್ಮ ಆಶಯಕ್ಕೆ ದಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ ಈ ಮಹಾಯೋಜನೆ ಯಶಸ್ವಿಯಾಯಿತು” ಎಂದು ತಿಳಿಸಿದರು.

ಫೆ.4ರಿಂದ 8ರವರೆಗೆ ದೈವಸ್ಥಾನದ ಒಳಾಂಗಣದಲ್ಲಿ ಋತ್ವಿಜರ ನೇತೃತ್ವದಲ್ಲಿ ನಿರಂತರ ವೈದಿಕ ವಿಧಿ ವಿಧಾನಗಳು ನಡೆಯಲಿದ್ದು, ಹೊರಾಂಗಣದಲ್ಲಿ ನಿರ್ಮಿಸಿರುವ ಎರಡು ವೇದಿಕೆಗಳಲ್ಲಿ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಭಾ ವೇದಿಕೆಗೆ “ಉಳ್ಳಾಯ ಮದಿಪು ಚಾವಡಿ” ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗೆ “ಕಾಂತುಲಕಣ ಗಡಿಪ್ರದಾನ ಯಾನೆ ಪಠೇಲ್ ಯಾದವ ಜಿ. ಬಂಗೇರ ಸಾಂಸ್ಕೃತಿಕ ವೇದಿಕೆ” ಎಂದು ನಾಮಕರಣ ಮಾಡಲಾಗಿದೆ. ಫೆ.4ರಿಂದ 8ರವರೆಗೆ ನಿರಂತರ ಭಜನಾ ಕಾರ್ಯಕ್ರಮಗಳು ನಡೆಯಲಿದ್ದು, ಅದಕ್ಕೆ “ಕಾಂತಾಬಾರೆ ಬುಧಾಬಾರ ಭಜಕ ಮಂಟಪ” ಎಂಬ ಹೆಸರು ನೀಡಲಾಗಿದೆ.

ಇತಿಹಾಸ ಪ್ರಸಿದ್ಧ ಕಾಂತಾಬಾರೆ ಬುಧಾಬಾರೆಯರು ಸುಮಾರು 800 ವರ್ಷಗಳ ಹಿಂದೆ ಸ್ಥಾಪಿಸಿದ ಈ ಗರೋಡಿಯನ್ನು ಸದ್ಯೋಭವಿಷ್ಯದಲ್ಲಿ ಅವಿಸ್ಮರಣೀಯವಾಗಿ ಉಳಿಸುವ ಉದ್ದೇಶದಿಂದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕರ್ಕೇರ ತಿಳಿಸಿದರು. ಸಸಿಹಿತ್ತಿನ ಕಡಲತೀರಕ್ಕೆ ಹೊಂದಿಕೊಂಡಿರುವ ಈ ದೈವಸ್ಥಾನ ಪ್ರವಾಸಿ ತಾಣವಾಗಿರುವ ಕಾರಣ ಮುಂದಿನ ದಿನಗಳಲ್ಲಿ ವಿಶಿಷ್ಟ ಕಲ್ಪನೆಯೊಂದಿಗೆ ಅಭಿವೃದ್ಧಿಪಡಿಸಿ ಧಾರ್ಮಿಕ ದತ್ತಿ ಇಲಾಖೆಯ ಸಹಯೋಗದಲ್ಲಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುವ ಆಶಯವಿದೆ ಎಂದರು.

ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪಾರ್ಕಿಂಗ್, ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ರೂಪಿಸಲಾಗಿದೆ. ಶ್ರೀ ಉಳ್ಳಾಯ ಹಾಗೂ ಪರಿವಾರ ಶಕ್ತಿಗಳಿಗೆ ಪ್ರಧಾನಗೊಂಡ ಕಾಂತಾಬಾರೆ ಬುಧಾಬಾರೆ ಮತ್ತು ಮಾಯಂದಾಳ ದೈವಕ್ಕೆ ಪ್ರತ್ಯೇಕ ಗುಡಿ ನಿರ್ಮಾಣ ಮಾಡಲಾಗಿದ್ದು, ಎದುರಿನ ಗೋಪುರ ನವೀಕರಣ ಹಾಗೂ ಪ್ರವೇಶದ್ವಾರ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ಈ ಜೀರ್ಣೋದ್ಧಾರ ಯಶಸ್ಸಿಗೆ ಊರಿನ ಜೀರ್ಣೋದ್ಧಾರ, ಆಡಳಿತ ಹಾಗೂ ಮಹಿಳಾ ಸಮಿತಿಗಳ ಜೊತೆಗೆ ಮುಂಬೈ, ಬೆಂಗಳೂರು ಸೇರಿದಂತೆ ಹೊರನಾಡು ಸಮಿತಿಗಳ ಸಹಕಾರವೇ ಕಾರಣವಾಗಿದೆ. ವಿವಿಧ ಉಪಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಬಿ. ಕರ್ಕೇರ, ಗೌರವಾಧ್ಯಕ್ಷ ಮಿಥುನ್ ರೈ, ಗೌರವ ಸಲಹೆಗಾರರಾದ ಸತ್ಯಜಿತ್ ಸುರತ್ಕಲ್ ಮತ್ತು ಚಂದ್ರಶೇಖರ ನಾನಿಲ್, ಕಾರ್ಯಾಧ್ಯಕ್ಷ ಪರಮಾನಂದ ವಿ. ಸಾಲ್ಯಾನ್, ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ಆರ್. ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಕೋಶಾಧಿಕಾರಿ ಎಸ್. ದಯಾನಂದ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶ್ರೀಧರ ವಿ. ಸುವರ್ಣ, ಮುಂಬೈ ಸಮಿತಿಯ ಅಧ್ಯಕ್ಷ ಸತೀಶ್ ಎನ್. ಕೋಟ್ಯಾನ್ ಹಾಗೂ ಸಂಚಾಲಕ ಪದ್ಮನಾಭ ಸಸಿಹಿತ್ತು ಉಪಸ್ಥಿತರಿದ್ದರು. ಜೊತೆಗೆ ಗೌರವ ಸಲಹೆಗಾರರಾದ ಪದ್ಮನಾಭ ಬಂಗೇರ ಮತ್ತು ರಮೇಶ್ ಪಿ. ಸನಿಲ್, ಕಾಂತುಲಕಣ ಗಡಿಪ್ರದಾನರಾದ ನಿರಂಜನ್ ಬಂಗೇರ ಹಾಗೂ ಲೀಲಾಧರ ಬಂಗೇರ, ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕರಾದ ಸುರೇಶ್ ಪೂಜಾರಿ ಮತ್ತು ದಾಮೋದರ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ ಹಾಗೂ ಗೌರವಾಧ್ಯಕ್ಷೆ ಪುಷ್ಪಾ ದಯಾನಂದ್, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಸ್.ಆರ್. ಪ್ರಭಾತ್, ಆಡಳಿತ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್, ಜೊತೆ ಕಾರ್ಯದರ್ಶಿ ಹರೀಶ್ ಕುಮಾರ್, ಜೊತೆ ಕೋಶಾಧಿಕಾರಿ ಯತೀಶ್ ಸಾಲ್ಯಾನ್ ಮತ್ತು ಮಾಧ್ಯಮ ಸಂಚಾಲಕ ಯಶೋಧರ ಕೋಟ್ಯಾನ್ ಭಾಗವಹಿಸಿದ್ದರು.

error: Content is protected !!