ಮಂಗಳೂರು: ಒಂದೂವರೆ ಲಕ್ಷ ಸಂಬಳ… ಅಮೆರಿಕನ್ ಕಂಪೆನಿ… ಯೂರೋದಲ್ಲಿ ವೇತನ… ಕೇಳಲು ಚೆಂದ. ನಂಬಲು ಸುಲಭ. ಆದರೆ ಆಗಿದ್ದೇನು? ಅದು ಅರ್ಮೇನಿಯಾದ ಹಿಮದಲ್ಲಿ ಕಲ್ಲು ಹೊರುವ ಕೂಲಿ… ಟಾಯ್ಲೆಟ್ ತೊಳೆಯುವ ಬದುಕು… ಊಟಕ್ಕೂ ಪರದಾಟ!
ಇದು ಸಿನಿಮಾ ಕಥೆ ಅಲ್ಲ. ಮಂಗಳೂರು ಸುತ್ತಮುತ್ತಲಿನ 30ಕ್ಕೂ ಹೆಚ್ಚು ಯುವಕರ ಬದುಕಿನಲ್ಲಿ ನಡೆದ ನಿಜವಾದ ವಂಚನೆ. “ಏಜೆನ್ಸಿ ಏನೂ ಇಲ್ಲ… ನಾವು ಅಲ್ಲಿಯೇ ಇದ್ದೇವೆ…”
ಎಂದು ಹೇಳಿ, ಟೂರಿಸ್ಟ್ ವೀಸಾದ ಕಾಗದ ತೋರಿಸಿ, ತಾಯಿ–ತಂದೆಯ ಚಿನ್ನ ಅಡವಿಟ್ಟು, 2–3 ಲಕ್ಷ ರೂ. ಕಿತ್ತುಕೊಂಡು, ಅಮಾಯಕ ಯುವಕರನ್ನು ಬಡ ರಾಷ್ಟ್ರ ಅರ್ಮೇನಿಯಾಗೆ ತಳ್ಳಿ ಬಿಟ್ಟಿದ್ದಾರೆ.

ಅಂದಹಾಗೆ ಮೋಸ ಮಾಡಿದ ಆರೋಪಿಗಳ್ಯಾರು ಗೊತ್ತಾ? ಗಂಜಿಮಠದ ಮಣೇಲ್ ನಿವಾಸಿ ರಾಕೇಶ್ ರೈ, ಯೆಯ್ಯಾಡಿಯ ಭೂಷಣ್ ಕುಲಾಲ್ ಮತ್ತು ಆಂಟನಿ ಪ್ರೀತಮ್ ಗರೋಡಿ.
ಇವರನ್ನು ನಂಬಿ ಅರ್ಮೇನಿಯಾಗೆ ಹೋದ ಯುವಕರು ಪಟ್ಟ ಪರದಾಟ ಆ ದೇವರಿಗೇ ಪ್ರೀತಿ. ಅರ್ಮೇನಿಯಾದಲ್ಲಿ ಕೆಲಸ, ಕಂಪೆನಿ, ವೇರ್‌ಹೌಸ್ … ಏನೂ ಇಲ್ಲ! ಈ ಮೂವರು ಆರೋಪಿಗಳು 30ಕ್ಕೂ ಹೆಚ್ಚು ಯುವಕರನ್ನು ಮೋಸ ಮಾಡಿದ್ದಾರೆಂದು ಸಂತ್ರಸ್ತ ಮಂಜುನಾಥ್ ನಾಯ್ಕ್, ಉಮೇಶ್ ಬಿ.ಸಿ.ರೋಡು, ಗಗನ್ ಯೆಯ್ಯಾಡಿ ಎಂಬವರು ದೂರು ನೀಡಿದ್ದಾರೆ.
ಇದ್ದದ್ದು ಒಂದೇ ರೂಮ್… ಅದರಲ್ಲೂ ಮಂಗಳೂರು, ಉಡುಪಿ ಭಾಗದ ಯುವಕರೇ ಹೆಚ್ಚು! ವಾರ ಕಳೆದರೂ ಕೆಲಸ ಇಲ್ಲ. ಊಟಕ್ಕೆ ದುಡ್ಡಿಲ್ಲ. ಹೊರಗೆ ಹೋದರೆ ತರಕಾರಿ ಬೆಲೆ ಆಕಾಶಕ್ಕೆ. ರಾತ್ರಿ ಹಿಮಪಾತ. ಬೆಳಿಗ್ಗೆ ಭಯ. ಅಷ್ಟಕ್ಕೂ ಅರ್ಮೇನಿಯಾ ಎನ್ನುವುದು ಪಾಕಿಸ್ತಾನಕ್ಕಿಂತಲೂ ಭಿಕಾರಿ ರಾಷ್ಟ್ರ ಅನ್ನೋದು ಅಲ್ಲಿ ಹೋದ ಮೇಲೆಯೇ ಗೊತ್ತಾಗಿದ್ದು.
ಇತ್ತ, ಇವರನ್ನು ಕರೆದೊಯ್ದವರದ್ದು ಮಾತ್ರ ಬಿಂದಾಸ್… ಮಜಾ… ಪಾರ್ಟಿ… ಜಾಲಿ ಲೈಫು… ವಿದೇಶ ಉದ್ಯೋಗದ ಕನಸು ತೋರಿಸಿ ಅವರಿಂದ ಲಕ್ಷ ಲಕ್ಷ ಪೀಕಿಸಿ ಹಾಯಾಗಿದ್ದ ಗಂಜಿಮಠದ ಮಣೇಲ್ ನಿವಾಸಿ ರಾಕೇಶ್ ರೈ, ಯೆಯ್ಯಾಡಿಯ ಭೂಷಣ್ ಕುಲಾಲ್ ಮತ್ತು ಆಂಟನಿ ಪ್ರೀತಮ್ ಗರೋಡಿ ಅಮಾಯಕರನ್ನು ನಂಬಿಸಿ ಸರಿಯಾಗಿ ಕೈ ಕೊಟ್ಟಿದ್ದಾರೆ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ.
ಕೊನೆಗೆ ಬದುಕಲು ಏನು ಮಾಡಬೇಕು? ಸಿಮೆಂಟ್ ಹೊತ್ತು, ಕಲ್ಲು ಎತ್ತಿ, ಟಾಯ್ಲೆಟ್ ಕ್ಲೀನ್ ಮಾಡಿ, ದಿನಕೂಲಿ ಮಾಡಿ ಹೊಟ್ಟೆ ತುಂಬಿಸುವ ಸ್ಥಿತಿ. ಟೂರಿಸ್ಟ್ ವೀಸಾದ 21 ದಿನ ದಾಟಿದ ಕಾರಣ “ಅಕ್ರಮ ವಲಸಿಗರು” ಎಂಬ ಮುದ್ರೆಯೂ ಬಿತ್ತು. ಜೊತೆಗೆ 50 ಸಾವಿರ ರೂ. ದಂಡ. ಮತ್ತೆ ಎಂದೂ ಅರ್ಮೇನಿಯಾ ಬರಲ್ಲ ಎಂದು ಬರೆದುಕೊಟ್ಟು, ಮನೆಯವರ ಚಿನ್ನ ಮತ್ತೆ ಅಡವಿಟ್ಟು, ಸಂತ್ರಸ್ತರು ಊರಿಗೆ ವಾಪಸ್ ಆಗಿದ್ದಾರೆ.

“40 ಸಾವಿರ ಸಂಬಳದ ಕೆಲಸ ಇತ್ತು. ಸಾಲ ತೀರಿಸೋಣ ಅಂದುಕೊಂಡು ಹೋದೆವು… ಆದರೆ ಬದುಕೇ ಸಾಲವಾಗಿ ಬಂತು” ಎಂದು ಕಣ್ಣೀರಿಟ್ಟಿದ್ದಾರೆ ಮಂಜುನಾಥ್ ನಾಯ್ಕ.
ಇತ್ತ, ಆರೋಪಿಗಳು? ಅರ್ಮೇನಿಯಾದಲ್ಲಿಯೇ ಇರಲಿಲ್ಲ. ದುಬೈನಲ್ಲಿ ಆರಾಮವಾಗಿ ಸುತ್ತಾಡುತ್ತಿದ್ದಾರೆ. ನಮ್ಮ ಹಣದಲ್ಲಿ ಅವರ ಜಾಲಿ ಮುಂದುವರಿದಿದೆ ಎಂಬ ಗಂಭೀರ ಆರೋಪ ಸಂತ್ರಸ್ಥರು ಮಾಡಿದ್ದಾರೆ. ಇದು ಕೇವಲ ವಂಚನೆ ಅಲ್ಲ. ಇದು ಯುವಕರ ಕನಸುಗಳ ಕೊಲೆ. ಪೋಷಕರ ನಂಬಿಕೆಯ ಮೇಲೆ ನಡೆದ ಪ್ರಹಾರ ಎನ್ನುತ್ತಾರೆ ಸಂತ್ರಸ್ಥರು.
ವಿದೇಶದಲ್ಲಿ ಒಂದೂವರೆ ಲಕ್ಷ ಸಂಬಳ ಇರುವ ಕೆಲಸ ತೆಗೆಸಿಕೊಡುತ್ತೇನೆ ಎಂದು ಹೇಳಿ ಅಮಾಯಕ ಯುವಕರನ್ನು ದೂರದ ಬಡ ರಾಷ್ಟ್ರ ಅರ್ಮೇನಿಯಾಕ್ಕೆ ಕರೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸಗೈದ ಬಗ್ಗೆ ಸಂತ್ರಸ್ತ ಯುವಕರು ಬಜ್ಪೆ ಮತ್ತು ಕದ್ರಿ ಠಾಣೆಗೆ ಮೂವರು ಯುವಕರ ವಿರುದ್ಧ ದೂರು ನೀಡಿದ್ದಾರೆ.