ಮಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ) ಯುಪಿಎ ಸರ್ಕಾರ ಜಾರಿಗೆ ತಂದ ವಿಶ್ವವೇ ಮೆಚ್ಚಿದ ಮಹತ್ವದ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಗ್ರಾಮ ಸ್ವರಾಜ್ಯ ಹಾಗೂ ರೈತರ ಹಿತ ಕಾಯುವ ಉದ್ದೇಶದಿಂದ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಈ ಯೋಜನೆಗೆ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಇದೀಗ ಮನ್ರೇಗಾ ಯೋಜನೆಗೆ ತಿದ್ದುಪಡಿ ತಂದು ಗಾಂಧೀಜಿ ಅವರ ಹೆಸರನ್ನು ತೆಗೆಯುವ ಮೂಲಕ ರಾಷ್ಟ್ರಪಿತನಿಗೆ ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ ರೈ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಮಂಡನೆಯಾದ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷ ಇದನ್ನು ತೀವ್ರವಾಗಿ ಟೀಕಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಈ ಯೋಜನೆ ಭ್ರಷ್ಟಾಚಾರದ ಕಾರ್ಯಕ್ರಮವಾಗಲಿದೆ ಎಂದು ಟೀಕಿಸಿದ್ದನ್ನು ಸ್ಮರಿಸಿದರು. ಆದರೆ ನಂತರ ಅದೇ ಕೇಂದ್ರ ಸರ್ಕಾರ ಆಧಾರ್ ಸೇರಿದಂತೆ ಯುಪಿಎ ಸರ್ಕಾರದ ಹಲವು ಯೋಜನೆಗಳಿಗೆ ತಾವೇ ಶಕ್ತಿ ತುಂಬಿದ ಉದಾಹರಣೆಗಳಿವೆ ಎಂದು ಹೇಳಿದರು.
ಮನ್ರೇಗಾ ಯೋಜನೆಗೆ ತರಲಾಗಿರುವ ತಿದ್ದುಪಡಿಯ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಹೆಸರನ್ನು ಅಳಿಸುವ, ಅವರಿಗೆ ಅಗೌರವ ತೋರಿಸುವ ಕೆಲಸ ನಡೆಯುತ್ತಿದೆ. ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಿರುವುದು ಖಂಡನೀಯವಾಗಿದ್ದು, ತಿದ್ದುಪಡಿ ಮೂಲಕ ಗಾಂಧೀಜಿಯನ್ನು ಅವಮಾನಿಸುವ ಪ್ರಯತ್ನ ನಡೆದಿದೆ ಎಂದರು.
ಯೋಜನೆಯ ಅನುದಾನ ಹಂಚಿಕೆಯಲ್ಲಿ ಕೂಡ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಮೊದಲು ಕೇಂದ್ರ ಸರ್ಕಾರವೇ ಹೆಚ್ಚಿನ ಹೊಣೆ ಹೊತ್ತಿದ್ದರೂ, ಇದೀಗ ರಾಜ್ಯಕ್ಕೆ 40 ಶೇಕಡಾ ಹೊಣೆ ನೀಡಿ, ಕೇಂದ್ರದ ಪಾಲನ್ನು 60 ಶೇಕಡಾಗೆ ಸೀಮಿತಗೊಳಿಸಿ ಅನುದಾನ ಕಡಿತಗೊಳಿಸಲಾಗಿದೆ. ಇದರಿಂದ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಗಾಂಧೀಜಿ ಬಗ್ಗೆ ಬಿಜೆಪಿ ಹೊಂದಿರುವ ಧೋರಣೆ ಇದರಿಂದಲೇ ಸ್ಪಷ್ಟವಾಗುತ್ತಿದೆ ಎಂದು ರಮಾನಾಥ ರೈ ಹೇಳಿದರು.

ಮಹಾತ್ಮಾ ಗಾಂಧೀಜಿ ಅವರಿಗೆ ಪ್ರಪಂಚದಾದ್ಯಂತ ಅಪಾರ ಗೌರವವಿದೆ. ಸಂಘ ಪರಿವಾರದ ಮನಸ್ಥಿತಿಯು ಗಾಂಧೀಜಿ ಪುತ್ತಳಿ ನಿರ್ಮಿಸಿ ಅದಕ್ಕೆ ಗುಂಡು ಹೊಡೆಯುವ ಮಟ್ಟಕ್ಕೆ ಇಳಿದಿದೆ. ಬಿಜೆಪಿ ಗೋಡ್ಸೆಯನ್ನು ವೈಭವೀಕರಿಸುತ್ತಿರುವುದು ದೇಶದ ಇತಿಹಾಸವನ್ನು ತಿದ್ದುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದರು. ಪ್ರಪಂಚದ 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಗಾಂಧೀಜಿ ಪ್ರತಿಮೆಗಳು ಸ್ಥಾಪನೆಯಾಗಿದ್ದು, ಅವರ ನಿಧನದ ವೇಳೆ ಇಡೀ ವಿಶ್ವವೇ ದುಃಖ ವ್ಯಕ್ತಪಡಿಸಿತ್ತು. ರಷ್ಯಾ ಅಧ್ಯಕ್ಷ ಪುತಿನ್ ಅವರು ಭಾರತಕ್ಕೆ ಬಂದಾಗ ಗಾಂಧೀಜಿ ಪ್ರತಿಮೆಗೆ ನಮಸ್ಕರಿಸಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಗಾಂಧೀಜಿ ಹೆಸರನ್ನು ಬದಲಾಯಿಸುವ ಉದ್ದೇಶವೇ ಜನರ ಮನಸ್ಸಿನಿಂದ ಗಾಂಧೀಜಿಯನ್ನು ದೂರ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್, ಈ ತಿದ್ದುಪಡಿಯನ್ನು ತಕ್ಷಣ ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಎಂ.ಶಶಿಧರ್ ಹೆಗ್ಡೆ, ಅಶ್ರಫ್ ಕೆ.ಇ, ಬ್ಲಾಕ್ ಅಧ್ಯಕ್ಷರಾದ ಬಿ.ಎಲ್ ಪದ್ಮನಾಭ ಕೋಟ್ಯಾನ್, ಪ್ರಕಾಶ್ ಸಾಲ್ಯಾನ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿಸಿಲ್ವ, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜುಳಾ ನಾಯಕ್, ಮುಂಚೂಣಿ ಘಟಕ ಜಿಲ್ಲಾ ಅಧ್ಯಕ್ಷರಾದ ಎಸ್ ಅಪ್ಪಿ, ದಿನೇಶ್ ಮುಳೂರ್, ಡಿಸಿಸಿ ಉಪಾಧ್ಯಕ್ಷ ಶುಭೋದಯ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಜಯಶೀಲಾ ಅಡ್ಯಂತಾಯ, ಟಿ.ಕೆ ಸುಧೀರ್, ಶಬೀರ್ ಸಿದ್ದಕಟ್ಟೆ ಉಪಸ್ಥಿತರಿದ್ದರು.