ಮಂಗಳೂರು: ಕೋಳಿ ಅಂಕಕ್ಕೆ ಕಡಿವಾಣ ಬಿದ್ದ ಬಳಿಕ ಅಲ್ಲಿ ನಡೆಯುತ್ತಿದ್ದ ಜೂಜು ಇದೀಗ ಕಂಬಳಕ್ಕೆ ಶಿಫ್ಟ್ ಆಗಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಐಕಳಬಾವ ಕಂಬಳವನ್ನು ಜೂಜು ರಹಿತವಾಗಿ ನಡೆಸುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಐಕಳಬಾವ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ತಬ್ಬಿಬ್ಬಾದ ಘಟನೆ ಸುದ್ದಿಗೋಷ್ಠಿಯಲ್ಲಿ ನಡೆದಿದೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ಅತ್ಯಂತ ಪುರಾತನ ಹಾಗೂ ದೈವಾರಾಧನೆ–ನಾಗಾರಾಧನೆಯ ಹಿನ್ನೆಲೆ ಹೊಂದಿರುವ ಐಕಳಬಾವ ಕಾಂತಾಬಾರೆ–ಬೂದಾಬಾರೆ ಕಂಬಳದ ಸುವರ್ಣ ಸಂಭ್ರಮ ಈ ಬಾರಿ ಫೆಬ್ರವರಿ 7 ಮತ್ತು 8ರಂದು ಮೂಲ್ಕಿಯ ಐಕಳ ಗ್ರಾಮದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡುತ್ತಿದ್ದರು. ಈ ವೇಳೆ ಪತ್ರಕರ್ತರಿಂದ “ಕೋಳಿ ಅಂಕಕ್ಕೆ ಅವಕಾಶ ಇಲ್ಲದ ಕಾರಣ ಅಲ್ಲಿ ನಡೆಯುತ್ತಿದ್ದ ಜೂಜು ಇದೀಗ ಕಂಬಳಕ್ಕೆ ಶಿಫ್ಟ್ ಆಗಿದೆ ಎಂಬ ಆರೋಪಗಳಿವೆ. ಜೂಜು ರಹಿತ ಕಂಬಳ ಮಾಡುತ್ತೀರಾ?” ಎಂಬ ನೇರ ಪ್ರಶ್ನೆ ತೂರಿಬಂದಿತು. ಇದರಿಂದ ಕೆಲಕಾಲ ಗೊಂದಲಕ್ಕೊಳಗಾದ ದೇವಿಪ್ರಸಾದ್ ಶೆಟ್ಟಿ, ನಂತರ ಸ್ಪಷ್ಟನೆ ನೀಡಿದರು.
“ಜೂಜು, ಇಸ್ಪೀಟ್, ಕೋಳಿ ಅಂಕಗಳಿಗೆ ನಮ್ಮ ಕಂಬಳದಲ್ಲಿ ಯಾವುದೇ ಅವಕಾಶವಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಕಂಬಳವನ್ನು ನಡೆಸಲಾಗುತ್ತಿದೆ. ನಮ್ಮ ಉದ್ದೇಶ ಜೂಜು ಮಾಡುವುದಲ್ಲ. ದೈವಾರಾಧನೆಯ ಹಿನ್ನೆಲೆ ಇರುವ ಕಂಬಳದಲ್ಲಿ ಈ ಬಾರಿ ನೂರಕ್ಕೆ ನೂರು ಜೂಜಿಗೆ ಅವಕಾಶ ಕೊಡುವುದಿಲ್ಲ” ಎಂದು ಅವರು ಹೇಳಿದರು.

ಎಲ್ಲ ಕಂಬಳಗಳಲ್ಲೂ ಜೂಜು ನಡೆಯುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊಬೈಲನ್ನು ಎತ್ತಿ ತೋರಿಸಿ, ಇದು ಬಂದ ಮೇಲೆ ಯಾವ ರೀತಿ ಜೂಜು ನಡೆಯುತ್ತಿದೆ ಎನ್ನುವುದು ನಮ್ಮ ಅರಿವಿಗೆ ಬರ್ತಾ ಇಲ್ಲ. ಜೂಜಿಗೆ ಕಡಿವಾಣ ಹಾಕಲು ನಾವು ಪ್ರಯತ್ನ ಮಾಡುತ್ತೇವೆ. ಆದರೆ ಮೊಬೈಲ್ ಫೋನ್ ಬಂದ ಬಳಿಕ ಯಾವ ರೀತಿಯಲ್ಲಿ ಜೂಜು ನಡೆಯುತ್ತಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತಿಲ್ಲ. ಮೊಬೈಲ್‌ಗಳನ್ನೇ ನಿಯಂತ್ರಿಸಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಕಂಬಳದ ವೇಳೆ ಸಮಯ ಪಾಲನೆ ಅತ್ಯಂತ ಮುಖ್ಯ. 24 ಗಂಟೆಯೊಳಗೆ ಕಂಬಳ ಮುಗಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಮಯವಾದರೆ ಅನಾಹುತಗಳ ಸಂಭವವಿರುವುದನ್ನು ಕಂಡಿದ್ದೇವೆ. ಕೋಣಗಳಿಗೂ ವಿಶ್ರಾಂತಿ ಅಗತ್ಯವಾಗಿರುವುದರಿಂದ ಸಮಯ ನಿಯಂತ್ರಣ ಅನಿವಾರ್ಯ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಮುಖರಾದ ತಿಲಕ್ ರಾಜ್ ಬಳ್ಳಾಲ್, ಪ್ರದೀಪ್ ಕುಮಾರ್ ರೈ ಐಕಳಬಾವ, ಚಿತ್ತರಂಜನ್ ಭಂಡಾರಿ, ಕುಶಾಲ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
