ಗೋಡ್ಸೆಗಿಂತ ಹೆಚ್ಚಾಗಿ ಗಾಂಧಿಯನ್ನು ಕೊಂದವರು ಕಾಂಗ್ರೆಸ್‌ನವರು: ನಳಿನ್‌ ಕುಮಾರ್‌ ಕಟೀಲ್‌ ಗಂಭೀರ ಆರೋಪ

ಮಂಗಳೂರು: ಗೋಡ್ಸೆಗಿಂತ ಹೆಚ್ಚಾಗಿ ಗಾಂಧಿಯನ್ನು ಕೊಂದವರು ಕಾಂಗ್ರೆಸ್‌ನವರೇ ಎಂದು ಮಾಜಿ ಸಂಸದ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಕೇಂದ್ರ ಸರ್ಕಾರದ ಬಜೆಟ್, ವಿಬಿಜಿ–ರಾಂ ಯೋಜನೆಯ ಹೆಸರು ಬದಲಾವಣೆ, ರಾಜ್ಯ–ಕೇಂದ್ರ ಅನುದಾನ, ಗಾಂಧೀಜಿಯ ಪರಿಕಲ್ಪನೆ ಹಾಗೂ ರಾಜ್ಯ ಸರ್ಕಾರದ ಆಡಳಿತ ಕುರಿತಂತೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ವಿಬಿಜಿ–ರಾಂ (ವೈಬ್ರಂಟ್ ವಿಲೇಜ್–ರಾಮ) ಹೆಸರು ಬದಲಾವಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಕಟೀಲ್, ಈ ಹಿಂದೆ ಮನ್‌ರೇಗಾ ಯೋಜನೆಯಲ್ಲಿ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಸುಮಾರು 27 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿತ್ತು ಎಂದು ಆರೋಪಿಸಿದರು. ಹಣ ಪೋಲಾಗುವುದನ್ನು ತಡೆಯುವ ಉದ್ದೇಶದಿಂದಲೇ ಯೋಜನೆಯಲ್ಲಿ ಪರಿವರ್ತನೆ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ‘ವಿರೋಧಕ್ಕೋಸ್ಕರ ವಿರೋಧ’ ಎಂದು ಟೀಕಿಸಿದರು. ಕಾಂಗ್ರೆಸ್‌ಗೆ ಹಣ ಪೋಲಾಗಬೇಕು ಎಂಬ ಆಸೆಯೇ ಎಂದು ಪ್ರಶ್ನಿಸಿದರು.

ಮಹಾತ್ಮ ಗಾಂಧೀಜಿ ಕುರಿತು ಮಾತನಾಡಿದ ಕಟೀಲ್, ಗಾಂಧೀಜಿ ಜೀವಂತವಾಗಿದ್ದಾಗಲೂ ಹಾಗೂ ಅವರ ಅಂತಿಮ ಕ್ಷಣಗಳಲ್ಲಿಯೂ ‘ರಾಮ’ ಎಂಬ ಶಬ್ದವನ್ನು ಉಚ್ಛರಿಸುತ್ತಿದ್ದರು. ಗಾಂಧೀಜಿಯ ಕನಸಾಗಿದ್ದದ್ದು ರಾಮರಾಜ್ಯ ಹಾಗೂ ಗ್ರಾಮ ಸ್ವರಾಜ್ಯ. ‘ನನ್ನ ಉಸಿರು–ಜೀವ–ಆತ್ಮ ಎಲ್ಲವೂ ರಾಮ’ ಎಂದು ಗಾಂಧೀಜಿ ಹೇಳುತ್ತಿದ್ದರೆಂದು ಉಲ್ಲೇಖಿಸಿದರು. ಗಾಂಧೀಜಿಗೆ ಪ್ರಿಯವಾಗಿದ್ದ ರಾಮನ ಹೆಸರನ್ನು ಸರ್ಕಾರ ಈ ಯೋಜನೆಗೆ ನೀಡಿದೆ ಎಂದು ಸಮರ್ಥಿಸಿದರು.

ಕಾಂಗ್ರೆಸ್ ಮೇಲೆ ಕಟೀಲ್ ತೀವ್ರ ವಾಗ್ದಾಳಿ ನಡೆಸಿ, ಗೋಡ್ಸೆಗಿಂತ ಹೆಚ್ಚಾಗಿ ಗಾಂಧಿಯನ್ನು ಕೊಂದವರು ಕಾಂಗ್ರೆಸ್‌ನವರೇ ಎಂದು ಹೇಳಿದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜಾತ್ಯತೀತತೆಯ ಬದಲಾಗಿ ಗಾಂಧೀಜಿ ರಾಮರಾಜ್ಯ ಮತ್ತು ವ್ಯಸನಮುಕ್ತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ಆದರೆ ಕಾಂಗ್ರೆಸ್ ಬ್ರಿಟಿಷರ ಆಡಳಿತ ಶೈಲಿಯಂತೆ ಜಾತಿ ಆಧಾರಿತ ರಾಜಕಾರಣ ಮಾಡುವ ಮೂಲಕ ನಿರಂತರವಾಗಿ ಗಾಂಧೀಯ ವಿಚಾರಧಾರೆಯನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದರು. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸನ್ನು ಕಾರ್ಯರೂಪಕ್ಕೆ ತಂದವರು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.

15ನೇ ಹಣಕಾಸು ಆಯೋಗದ ಮೂಲಕ ಪ್ರತಿ ಪಂಚಾಯತ್‌ಗೆ ಸುಮಾರು ಒಂದು ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಪ್ರತಿ ಮನೆಗೂ ನಳ್ಳಿ ನೀರು, ಸ್ವಚ್ಛ ಭಾರತ, ಸ್ಮಾರ್ಟ್ ಸಿಟಿ ಮುಂತಾದ ಯೋಜನೆಗಳೆಲ್ಲ ಗಾಂಧೀಜಿಯ ಕಲ್ಪನೆಯೇ ಆಗಿದ್ದು, ಅವುಗಳನ್ನು ಅನುಷ್ಠಾನಗೊಳಿಸಿರುವುದು ಮೋದಿ ಸರ್ಕಾರ ಎಂದು ಹೇಳಿದರು.

ಕಳೆದ 10–12 ವರ್ಷಗಳ ಮೋದಿ ಸರ್ಕಾರದ ಆಡಳಿತದ ಮೇಲೆ ಜನರಿಗೆ ಭರವಸೆ ಇದೆ. ಭಾರತದ ಆರ್ಥಿಕತೆ ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ವಿದೇಶಾಂಗ ನೀತಿ ಬಲಿಷ್ಠವಾಗಿದ್ದು, ಹಲವು ರಾಷ್ಟ್ರಗಳು ಭಾರತವನ್ನು ಸಂಪರ್ಕಿಸುತ್ತಿವೆ. ಅಮೆರಿಕದ ನೀತಿಗಳ ವಿರುದ್ಧವೂ ಭಾರತ ಗಟ್ಟಿಯಾಗಿ ನಿಂತಿದೆ. ವಿಶ್ವದಲ್ಲಿ ಭಾರತದ ಗೌರವ ಮತ್ತು ಗುರುತು ಹೆಚ್ಚಾಗಿದೆ ಎಂದು ಕಟೀಲ್ ಹೇಳಿದರು.

ಬಜೆಟ್ ಕುರಿತು ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಉದ್ದೇಶದಿಂದಲೇ ಈ ಬಜೆಟ್ ರೂಪಿಸಲಾಗಿದೆ. ಜನರ ಆಶೀರ್ವಾದದಿಂದ ಯೋಜನೆಗಳು ಮನೆಮನೆಗೆ ತಲುಪಿವೆ. ಪ್ರತಿ ಮನೆಯಲ್ಲೂ ಮೋದಿಯವರ ಒಂದಲ್ಲೊಂದು ಯೋಜನೆಯ ಲಾಭ ಇದೆ. ಫಸಲು ಭೀಮಾ ಯೋಜನೆಯಿಂದ ರೈತರು, ಉಜ್ವಲ ಯೋಜನೆಯಿಂದ ಮಹಿಳೆಯರು ಲಾಭ ಪಡೆದಿದ್ದಾರೆ. ವಂದೇ ಭಾರತ ರೈಲು, ರಾಷ್ಟ್ರೀಯ ಹೆದ್ದಾರಿ, ಕಾರ್ಕಳ ಚತುಷ್ಪಥ ರಸ್ತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಉಲ್ಲೇಖಿಸಿದರು.

ರಾಜ್ಯಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕಟೀಲ್, 2014ರ ಮೊದಲು ಯುಪಿಎ ಸರ್ಕಾರ ನೀಡಿದ ಅನುದಾನ ಮತ್ತು ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ನೀಡಿದ ಅನುದಾನವನ್ನು ಹೋಲಿಕೆ ಮಾಡಲಿ ಎಂದರು. ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಿದರೆ ಕೇಂದ್ರ ಮತ್ತು ರಾಜ್ಯ ಎಷ್ಟು ಹಣ ನೀಡಿವೆ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಹಣ ದುರುಪಯೋಗವಾಗಿದೆ. ಗುತ್ತಿಗೆದಾರರಿಗೆ ಪಾವತಿಸಲು ಹಾಗೂ ನೌಕರರ ಸಂಬಳಕ್ಕೆ ಹಣ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಇದು ಗ್ಯಾರಂಟಿ ಯೋಜನೆಗಳ ಕಾರಣ ಮಾತ್ರವಲ್ಲ, ಆರ್ಥಿಕ ನಿರ್ವಹಣೆಯ ತಪ್ಪು ನಿರ್ಧಾರಗಳ ಪರಿಣಾಮ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ಬಾರಿ ಬಜೆಟ್ ಮಂಡಿಸಿರುವ ಅನುಭವ ಹೊಂದಿದ್ದಾರೆ. ಪ್ರಣಾಳಿಕೆ ರೂಪಿಸುವಾಗ ಅನುದಾನದ ಮೂಲ ಎಷ್ಟಿದೆ ಎಂಬುದನ್ನು ತಿಳಿದಿರಬೇಕು. ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿದರು. ಜಿಎಸ್‌ಟಿ ಸಭೆಗಳಿಗೆ ಮುಖ್ಯಮಂತ್ರಿ ಹಾಜರಾಗದೇ, ಪತ್ರಿಕೆಗಳಲ್ಲಿ ಮಾತ್ರ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಪಂಚಾಯತ್ ಚುನಾವಣೆ ಮುಂದೂಡಿಕೆ ಕುರಿತು ಮಾತನಾಡಿದ ಕಟೀಲ್, ಮನಪಾ, ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳ ಅವಧಿ ಮುಗಿದರೂ ಅಧಿಕಾರ ಹಸ್ತಾಂತರದ ಗೊಂದಲದಿಂದ ಚುನಾವಣೆ ಮುಂದೂಡಲಾಗುತ್ತಿದೆ ಎಂದು ಹೇಳಿದರು.

ಪಕ್ಷದ ನಾಯಕತ್ವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ವಿಜಯೇಂದ್ರ ಅವರು ಸ್ಪಷ್ಟ ನಾಯಕತ್ವದೊಂದಿಗೆ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ತಾವು ರಾಜ್ಯಾಧ್ಯಕ್ಷರಾಗಿದ್ದಾಗಲೂ ಗೊಂದಲದ ವದಂತಿಗಳು ಇದ್ದರೂ ನಾಲ್ಕು ವರ್ಷ ಎಂಟು ತಿಂಗಳು ಅಧಿಕಾರದಲ್ಲಿದ್ದೆ. ಅದೇ ರೀತಿ ವಿಜಯೇಂದ್ರ ಕೂಡ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಟೀಲ್ ಹೇಳಿದರು.

error: Content is protected !!