ಮಂಗಳೂರು: ಆಕ್ಷನ್ ಥ್ರಿಲ್ಲರ್ ಹಾಗೂ ಮ್ಯೂಸಿಕಲ್–ಅಡ್ವೆಂಚರ್ ಅಂಶಗಳನ್ನು ಒಳಗೊಂಡಿರುವ ಕನ್ನಡ ಸಿನಿಮಾ ‘ಕರಿಕಾಡ’ ಫೆಬ್ರವರಿ 6ರಂದು ಕರ್ನಾಟಕ ರಾಜ್ಯಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಕಾಡ ನಟರಾಜ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸಿನಿಮಾದಲ್ಲಿ ನಾನು ನಾಯಕನಟನಾಗಿ ಅಭಿನಯಿಸಿದ್ದೇನೆ. ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಯಶ್ ಶೆಟ್ಟಿ, ರಾಜು ಬೆಳವಾಡಿ, ದಿವಂಗತ ರಾಕೇಶ್ ಪೂಜಾರಿ, ಚಂದ್ರಪ್ರಭಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ” ಎಂದು ಮಾಹಿತಿ ನೀಡಿದರು.
ಚಿತ್ರದ ಚಿತ್ರೀಕರಣವನ್ನು ಕಳಸ, ಕುದುರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಹಾಗೂ ಚನ್ನಪಟ್ಟಣ ಸೇರಿದಂತೆ ವಿವಿಧ ಸುಂದರ ತಾಣಗಳಲ್ಲಿ ನಡೆಸಲಾಗಿದೆ. “ಕರಿ ಅಂದರೆ ಆನೆ, ಕಾಡ ಅಂದರೆ ನಾಯಕನ ಹೆಸರು” ಎಂದು ಅವರು ಚಿತ್ರದ ಶೀರ್ಷಿಕೆಯ ಅರ್ಥವನ್ನು ವಿವರಿಸಿದರು.

ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ್ ಮಾತನಾಡಿ, “ಸಿನಿಮಾದಲ್ಲಿ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ನಾವೆಲ್ಲರೂ ಸಿನಿಮಾ ಬಿಡುಗಡೆಗಾಗಿ ಉತ್ಸುಕರಾಗಿದ್ದೇವೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.
ಸಂಭಾಷಣೆ, ಕಥೆ–ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಕೆ. ವೆಂಕಟೇಶ್ ಮಾತನಾಡಿ, “ಸಿನಿಮಾದಲ್ಲಿ ಒಟ್ಟು ಏಳು ಹಾಡುಗಳಿದ್ದು, ಆರು ಹಾಡುಗಳನ್ನು ನಾನು ಬರೆಯಲಾಗಿದೆ. 60 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ವಿಷಯವಸ್ತು ಚಿತ್ರದಲ್ಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟಿ ನಿರೀಕ್ಷಾ ಶೆಟ್ಟಿ ಮಾತನಾಡಿ, “ಇದು ನನ್ನ ಮೊದಲ ಕನ್ನಡ ಸಿನಿಮಾ. ಮೊದಲ ಶೋ ಮಂಗಳೂರಿನಲ್ಲಿ ನಡೆಯುತ್ತಿರುವುದು ಇನ್ನಷ್ಟು ಸಂತೋಷ ತಂದಿದೆ. ಈ ಸಿನಿಮಾ ನನ್ನ ಕರಿಯರ್‌ಗೆ ಉತ್ತಮ ಬ್ರೇಕ್ ನೀಡಲಿದೆ ಎಂಬ ನಂಬಿಕೆ ಇದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.
‘ಕರಿಕಾಡ’ ಸಿನಿಮಾ ಕುರಿತು
‘ಕರಿಕಾಡ’ ಒಂದು ಆಕ್ಷನ್ ಥ್ರಿಲ್ಲರ್ ಹಾಗೂ ಮ್ಯೂಸಿಕಲ್ ಜರ್ನಿ–ಅಡ್ವೆಂಚರ್ ಅಂಶಗಳನ್ನು ಒಳಗೊಂಡ ಸಿನಿಮಾ. ಬಣ್ಣದ ಲೋಕದ ಕನಸು ಹೊತ್ತು ಬಂದಿರುವ ಕಾಡ ನಟರಾಜ್ ಈ ಚಿತ್ರದ ಮೂಲಕ ಪ್ರೇಕ್ಷಕರ ಆಶೀರ್ವಾದ ಪಡೆಯಲು ಸಜ್ಜಾಗಿದ್ದಾರೆ. ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ರಜೆ ಸಿಕ್ಕಾಗಲೆಲ್ಲಾ ಅಭಿನಯ ಮಾಡಿ 2024ರ ನವೆಂಬರ್ ವೇಳೆಗೆ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿರುವುದು ವಿಶೇಷ.

ರಿದ್ಧಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಕಾಡ ನಟರಾಜ್ ಅವರ ಧರ್ಮಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದು, ಸ್ನೇಹಿತ ರವಿಕುಮಾರ್ ಎಸ್.ಆರ್. ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.
ಚಿತ್ರಕ್ಕೆ ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದು, ಶಶಾಂಕ್ ಶೇಷಗಿರಿ ಅವರ ಹಿನ್ನಲೆ ಸಂಗೀತ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ. ಜೀವನ್ ಗೌಡ ಛಾಯಾಗ್ರಹಣ, ದೀಪಕ್ ಸಿ.ಎಸ್. ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
‘ಕರಿಕಾಡ’ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದ್ದು, ಫೆಬ್ರವರಿ 6ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಈಗಾಗಲೇ ಟೈಟಲ್ ಟೀಸರ್, ಟೀಸರ್, ಮೂರು ಹಾಡುಗಳು ಬಿಡುಗಡೆಯಾಗಿದ್ದು, ಟ್ರೈಲರ್ ಮೂಲಕವೂ ಚಿತ್ರತಂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಚಿತ್ರದ ತಾರಾಗಣದಲ್ಲಿ ಮಂಜುಸ್ವಾಮಿ, ಯಶ್ ಶೆಟ್ಟಿ, ಗೋವಿಂದ ಗೌಡ, ದೀವಾಕರ್, ಕಾಮಿಡಿ ಕಿಲಾಡಿ ಸೂರ್ಯ, ದಿವಂಗತ ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭಾ, ಕರಿಸುಬ್ಬು, ಗಿರಿ, ಬಲರಾಜ್ ವಾಡಿ, ಮಾಸ್ಟರ್ ಆರ್ಯನ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.