ʻಲವ್‌ ಯೂ ಇನ್‌ಸ್ಪೆಕ್ಟರ್…ʼ! ಪ್ರೀತಿ, ಪ್ರೇಮ, ಲವ್‌ ಲೆಟರ್‌… ಉಡುಗೊರೆಯಾಗಿ ಸಿಕ್ಕಿದ್ದು ʻಜೈಲು!ʼ

ಬೆಂಗಳೂರು: ಪ್ರೀತಿ, ಪ್ರೇಮ, ಧಗಾ, ವಂಚನೆ, ಅಂಡರ್‌ವಲ್ಡ್‌, ರೌಡಿಸಂ, ಗ್ಯಾಂಗ್‌ವಾರ್‌ ಇದೆಲ್ಲಾ ಬೆಂಗಳೂರಲ್ಲಿ ಕಾಮನ್. ಇಲ್ಲಿ ಪ್ರೀತಿಸಿ ಮೋಸವಾದವರು ಪೊಲೀಸ್ ಠಾಣೆ ಮೆಟ್ಟಿಲೇರೋದು ಹೊಸದೇನಲ್ಲ. ಆದರೆ ಇಲ್ಲೊಂದು ಪ್ರಕರಣದಲ್ಲಿ ಕಥೆ ಉಲ್ಟಾ ಹೊಡೆದಿದೆ. ಇಲ್ಲಿ ಯುವತಿ ಠಾಣೆಗೆ ದೂರು ನೀಡಿಲ್ಲ. ಪೊಲೀಸ್ ಅಧಿಕಾರಿಯೇ ಠಾಣೆಗೆ ಹೋಗಿ, “ಸಾರ್, ನನ್ನನ್ನೇ ಪ್ರೀತಿಸಬೇಕು ಅಂತ ಒಬ್ಬಳು ನನ್ನ ಹಿಂದೆ ಬಿದ್ದಿದ್ದಾಳೆ” ಎಂದು ದೂರು ಕೊಟ್ಟಿದ್ದಾರೆ!

ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಜೆ. ಸತೀಶ್ ಅವರ ಜೀವನಕ್ಕೆ ಅಡ್ಡಿಯಾಗಿದ್ದದ್ದು ಯಾವುದೋ ರೌಡಿಗಳ ಬೆದರಿಕೆ ಅಲ್ಲ, ರಾಜಕೀಯ ಒತ್ತಡವೂ ಅಲ್ಲ. ಅದು‌ ಹುಚ್ಚು ಹುಡುಗಿಯ ‘ಹುಚ್ಚು ಪ್ರೀತಿ!’

ಪ್ರೀತಿ ಶುರುವಾದದ್ದು ಒಂದು ಕರೆಯಿಂದ… ಅಕ್ಟೋಬರ್ 30. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್‌ರ ಮೊಬೈಲ್‌ಗೆ ಒಂದು ಕರೆ. “ಏನೋ ದೂರು ಇರಬೇಕು” ಎಂದು ಕರೆ ಸ್ವೀಕರಿಸಿದ್ದಾರೆ. ಅತ್ತ ಕಡೆಯಿಂದ ಮಧುರವಾದ ಧ್ವನಿ— “ನಾನು ಸಂಜನಾ… ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನೀವೂ ನನ್ನನ್ನು ಪ್ರೀತಿಸಬೇಕು!”

ಇನ್‌ಸ್ಪೆಕ್ಟರ್‌ಗೆ ಇದು ತಮಾಷೆಯಂತೆ ತೋರಿದೆ. ಆದರೆ ಆ ತಮಾಷೆ ನಾಲ್ಕು ತಿಂಗಳ ಕಾಲ ಮುಂದುವರಿಯುತ್ತದೆ ಅನ್ನೋದು ಆಗ ಗೊತ್ತಿರಲಿಲ್ಲ. ಬೇರೆ ಬೇರೆ ನಂಬರ್‌ಗಳಿಂದ ಕರೆ, ವಾಟ್ಸಾಪ್ ಮೆಸೇಜ್‌, ಪ್ರೇಮ ನಿವೇದನೆ— ಎಲ್ಲವೂ ನಿರಂತರ. ಪೊಲೀಸ್‌ ಇನ್ಸ್‌ಪೆಕ್ಟ್ರರ್‌ಗೆ ಕಿರಿಕಿರಿ ಮೇಲೆ ಕಿರಿಕಿರಿ

“ನಾನು ಕಾಂಗ್ರೆಸ್ ಕಾರ್ಯಕರ್ತೆ… ಸಿಎಂ-ಡಿಸಿಎಂ ನನ್ನ ಆಪ್ತರು!”

ಅಯ್ಯಪ್ಪ ನಗರ ನಿವಾಸಿ ಸಂಜನಾ ಅಲಿಯಾಸ್ ವನಜಾ ತನ್ನನ್ನು ಕಾಂಗ್ರೆಸ್ ಕಾರ್ಯಕರ್ತೆ ಎಂದು ಪರಿಚಯಿಸಿಕೊಂಡು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು, ಮೋಟಮ್ಮ, ಲಕ್ಷ್ಮಿ ಹೆಬ್ಬಾಳಕರ ಜೊತೆಗಿನ ಫೋಟೋಗಳನ್ನು ವಾಟ್ಸಾಪ್‌ಗೆ ಸುರಿದಿದ್ದಾಳೆ. “ನಿಮಗೆ ಬೇಕಾದರೆ ಇವರಿಂದ ಶಿಫಾರಸು ಮಾಡಿಸುತ್ತೇನೆ… ನನ್ನನ್ನು ಪ್ರೀತಿಸಿ” ಎಂಬುದು ಆಕೆಯ ಡೈಲಾಗ್.

ಇದಕ್ಕಿಂತ ವಿಚಿತ್ರ ಏನು ಗೊತ್ತಾ? ಡಿಸಿಎಂ ಮತ್ತು ಗೃಹ ಸಚಿವರ ಕಚೇರಿಯಿಂದಲೇ ಇನ್‌ಸ್ಪೆಕ್ಟರ್‌ಗೆ ಕರೆ! “ಆ ಮಹಿಳೆಯ ದೂರು ಯಾಕೆ ಸ್ವೀಕರಿಸುತ್ತಿಲ್ಲ?” ಅಂತ!

ಇನ್‌ಸ್ಪೆಕ್ಟರ್ ಹೇಳಿದ್ರು: “ಆಕೆ ಠಾಣೆಗೆ ಬಂದೇ ಇಲ್ಲ. ಫೋನ್‌ನಲ್ಲಿ ಅಸಂಬದ್ಧ ಮಾತು. ದೂರು ಕೊಡಬೇಕಾದ್ರೆ ಠಾಣೆಗೆ ಬರಲಿ.”

ಇನ್‌ಸ್ಪೆಕ್ಟರ್ ಠಾಣೆಯಲ್ಲಿ ಇಲ್ಲದ ಸಮಯದಲ್ಲಿ ಯುವತಿ ಠಾಣೆಗೆ ಬಂದು— “ನಾನು ಇನ್‌ಸ್ಪೆಕ್ಟರ್‌ರ ಸಂಬಂಧಿ” ಎಂದು ಹೇಳಿಕೊಂಡು ಹೂಗುಚ್ಛ, ಕಾಣಿಕೆ ಡಬ್ಬಿ ಇಟ್ಟು ಹೋಗಿದ್ದಾಳೆ.

ನಂತರ ಇನ್‌ಸ್ಪೆಕ್ಟರ್ ಕರೆ ಮಾಡಿ ಸ್ಪಷ್ಟವಾಗಿ ಹೇಳಿದ್ದಾರೆ “ಈ ರೀತಿ ಕಾಣಿಕೆ ಕೊಡೋದು ಸರಿಯಲ್ಲ.”

ನವೆಂಬರ್ 7ರಂದು ಯುವತಿ ಒಂದು ಲಕೋಟೆ ಕೊಟ್ಟಿದ್ದಾಳೆ. ಒಳಗೆ ಮೂರು ಪತ್ರ, 20 ಮಾತ್ರೆಗಳು. ಪತ್ರದಲ್ಲಿ ಪ್ರೇಮ ನಿವೇದನೆ. ಜೊತೆಗೆ ಆತ್ಮಹತ್ಯೆ ಬೆದರಿಕೆ. “ನನ್ನ ಸಾವಿಗೆ ನೀವೇ ಕಾರಣ” ಅನ್ನೋ ಸಾಲು. “ಲವ್ ಯು ಚಿನ್ನಿ…” ಎಂದು ರಕ್ತದಲ್ಲಿ ಬರೆಯುವ ಬೆದರಿಕೆಯೂ!

ಇನ್‌ಸ್ಪೆಕ್ಟರ್‌ಗೆ ಅರ್ಥವಾಗಿದೆ— ಇದು ಪ್ರೀತಿ ಅಲ್ಲ. ಇದು ಕಿರುಕುಳ. ಇದು ಅಪಾಯ ಅಂತ…! “ನನಗೆ ಮಾನಸಿಕ ತೊಂದರೆ ಆಗುತ್ತಿದೆ. ನನ್ನ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ನನಗೂ ಆಕೆಗೆ ಯಾವುದೇ ಸಂಬಂಧ ಇಲ್ಲ” ಎಂದು ಇನ್‌ಸ್ಪೆಕ್ಟರ್‌ ಸತೀಶ್‌ ತಮ್ಮದೇ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಯುವತಿಯ ವಾಸಸ್ಥಳ ಪತ್ತೆಹಚ್ಚಿ ಬಂಧಿಸಿದ್ದಾರೆ. ಆಕೆ ಹಳೆಯ ಕಥೆಗಳು ಅಷ್ಟೇ ರೋಚಕವಾಗಿದೆ. ವನಜಾ ಸಾಮಾನ್ಯದ ಹೆಂಗಸಲ್ಲ. 2023ರಲ್ಲಿ ಗುತ್ತಿಗೆದಾರನ ಮೂರು ಅಂತಸ್ತಿನ ಕಟ್ಟಡ ಕಬಳಿಸಲು ಯತ್ನ, ರೌಡಿಗಳ ಹೆಸರಿನಲ್ಲಿ ಬೆದರಿಕೆ, ಪೊಲೀಸ್ ಕಾನ್‌ಸ್ಟೇಬಲ್‌, ಹಿರಿಯ ಅಧಿಕಾರಿಗಳಿಗೂ ಬೆದರಿಕೆ… ಹೀಗೆ ನಾನಾ ನೌಟಂಕಿಗಳು ತನಿಖೆಯಲ್ಲಿ ಹೊರಬಂದಿವೆ.

error: Content is protected !!