ಮಂಗಳೂರು: ಟ್ರಾಫಿಕ್ ದಂಡ ಪಾವತಿ ಹೆಸರಿನಲ್ಲಿ ನಕಲಿ ಲಿಂಕ್‌ಗಳು ಹಾಗೂ APK ಫೈಲ್‌ಗಳನ್ನು ಕಳುಹಿಸಿ ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿರುವುದರಿಂದ, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಟ್ರಾಫಿಕ್ ಫೈನ್ ಪಾವತಿಸಲು ಯಾವುದೇ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಇಲ್ಲ. ಟ್ರಾಫಿಕ್ ದಂಡವನ್ನು ಪಾವತಿಸಲು ಸರ್ಕಾರದ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಕರ್ನಾಟಕ ಒನ್ (Karnataka One) ಕೇಂದ್ರಗಳೇ ಅಧಿಕೃತ ಮಾರ್ಗಗಳು ಎಂದು ಸ್ಪಷ್ಟಪಡಿಸಲಾಗಿದೆ.
ಕೆಲವು ದುಷ್ಕರ್ಮಿಗಳು SMS ಅಥವಾ ವಾಟ್ಸಾಪ್ ಮೂಲಕ ʻಟ್ರಾಫಿಕ್ ಫೈನ್ ಬಾಕಿ ಇದೆʼ ಎಂಬ ಸಂದೇಶ ಕಳುಹಿಸಿ, ಲಿಂಕ್ ಮೇಲೆ ಕ್ಲಿಕ್ ಮಾಡಿ APK ಫೈಲ್ ಡೌನ್‌ಲೋಡ್ ಮಾಡಲು ಒತ್ತಾಯಿಸುತ್ತಿದ್ದಾರೆ. ಈ ರೀತಿಯ ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಿದಲ್ಲಿ ಮೊಬೈಲ್ ಫೋನ್ ಹ್ಯಾಕ್ ಆಗಿ, ಬ್ಯಾಂಕ್ ವಿವರಗಳು ಹಾಗೂ OTPಗಳು ದುಷ್ಕರ್ಮಿಗಳ ಕೈಗೆ ಸಿಕ್ಕಿ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಈ ರೀತಿಯ ವಂಚನೆಗೆ ಕಳೆದ ದಿನ ಇಬ್ಬರು ನಾಗರಿಕರು ಬಲಿಯಾಗಿದ್ದು, ಅವರ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡಿರುವುದು ವರದಿಯಾಗಿದೆ.
ಅಪರಿಚಿತ ಲಿಂಕ್‌ಗಳು ಅಥವಾ APK ಫೈಲ್‌ಗಳ ಮೂಲಕ ಯಾವುದೇ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಬಾರದು. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ Play Store ಅಥವಾ App Storeನಲ್ಲಿರುವ ದೃಢೀಕೃತ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಸಬೇಕು ಎಂದು ಪೊಲೀಸ್ ಇಲಾಖೆ ಸಲಹೆ ನೀಡಿದೆ.
ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿ, ಈ ಮಾಹಿತಿಯನ್ನು ಕುಟುಂಬ ಸದಸ್ಯರು ಹಾಗೂ ಇತರರಿಗೆ ಹಂಚಿಕೊಳ್ಳುವ ಮೂಲಕ ಆನ್‌ಲೈನ್ ವಂಚನೆ ತಡೆಯಲು ಸಹಕರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.