ಇನ್ಸ್ಟಾಗ್ರಾಂ ಮೂಲಕ ಬಜ್ಪೆ ಪೊಲೀಸರ ಅವಹೇಳನ, ಆರೋಪಿಗಳಿಗೆ ರಾಜಾತಿಥ್ಯ ಆರೋಪ: ಆರೋಪಿ ಸೆರೆ

ಮಂಗಳೂರು: ಇನ್ಸ್ಟಾಗ್ರಾಂ ಮೂಲಕ ಪ್ರಚೋದನಕಾರಿ ಹಾಗೂ ಪೊಲೀಸರ ವಿರುದ್ಧ ಆಧಾರರಹಿತ ಆರೋಪಗಳನ್ನು ಒಳಗೊಂಡ ಸಂದೇಶಗಳನ್ನು ಹರಿಬಿಟ್ಟ ಆರೋಪದಡಿ ಒಬ್ಬ ಯುವಕನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಕಾಟಿಪಳ್ಳ ನಿವಾಸಿ ಬಂಧಿತನನ್ನು ಅಭಿಷೇಕ್ ಎಮ್. (23) ಬಂಧಿತ ಆರೋಪಿ.

ಆರೋಪಿಯು mr_a_titude ಎಂಬ Instagram ಪೇಜ್ ಮೂಲಕ Hotel Nisarga ಎಂಬ ಹೆಸರಿನ ಫೋಟೋವನ್ನು ಪ್ರಕಟಿಸಿ, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿಗಳಿಗೆ ಪೊಲೀಸರೇ ರಾಜಾತಿಥ್ಯ ನೀಡುತ್ತಿದ್ದು, ದಿನನಿತ್ಯ ನಿಸರ್ಗ ಹೋಟೆಲ್‌ನಿಂದ ಬೀಫ್ ಊಟ ಒದಗಿಸುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾನೆ. ಜೊತೆಗೆ ಅಪರಾಧಿಗಳೊಂದಿಗೆ ಪೊಲೀಸ್ ಇಲಾಖೆ ಕೈಜೋಡಿಸಿದೆ, ಪೊಲೀಸ್ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಕುಸಿಯುತ್ತಿದೆ ಎಂಬರ್ಥದ ಪ್ರಚೋದನಕಾರಿ ಸಂದೇಶಗಳನ್ನು ಸಾರ್ವಜನಿಕವಾಗಿ ಹರಿಬಿಟ್ಟಿದ್ದಾನೆ ಎಂದು ದೂರಲಾಗಿದೆ.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 84/2025ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 353(1)(ಸಿ), 353(2), 56, 57 ಹಾಗೂ 189 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ನಗರದ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ತನಿಖೆಯ ವೇಳೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ನಡೆಸಿದ್ದಾರೆ. ಬಳಿಕ ಆರೋಪಿತನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ದಾಖಲೆಗಳ ಪ್ರಕಾರ, ಆರೋಪಿತನ ವಿರುದ್ಧ ಈ ಹಿಂದೆಯೂ ಗಂಭೀರ ಸ್ವಭಾವದ ಹಲವು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಹಲ್ಲೆ ಹಾಗೂ ಕೊಲೆ ಪ್ರಕರಣಗಳು ಸೇರಿ ಮೂರು ಪ್ರಕರಣಗಳು ದಾಖಲಾಗಿದ್ದರೆ, ಕಾಪು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವೂ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!