ಹೊಸ ವರ್ಷ ಆಚರಣೆ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಿಂದ ಕಟ್ಟುನಿಟ್ಟಿನ ಮಾರ್ಗಸೂಚಿಗಳು

ಮಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯನ್ನು ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯೊಂದಿಗೆ ನಡೆಸುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಸಾರ್ವಜನಿಕ ಹಿತಾಸಕ್ತಿಗಾಗಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

Bonfire Place for New Year Celebration: Kanha

ಹೊಸ ವರ್ಷಾಚರಣೆಯನ್ನು ಆಯೋಜಿಸುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಹಾಗೂ ಇತರ ಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಿಂದ ಕಡ್ಡಾಯವಾಗಿ ಪೂರ್ವ ಅನುಮತಿ ಪಡೆಯಬೇಕು. ಸಂಬಂಧಿತ ಅರ್ಜಿಗಳನ್ನು ದಿನಾಂಕ 23-12-2025 ರಂದು ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಪೂರ್ವ ಅನುಮತಿ ಇಲ್ಲದೆ ಯಾವುದೇ ಹೊಸ ವರ್ಷದ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 12.30 ಗಂಟೆಯೊಳಗಾಗಿ ಪೂರ್ಣಗೊಳ್ಳಬೇಕಾಗಿದ್ದು, ಆ ಸಮಯದ ಬಳಿಕ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ. ಧ್ವನಿಮುದ್ರಣ ವ್ಯವಸ್ಥೆ ಮತ್ತು ಲೌಡ್‌ಸ್ಪೀಕರ್‌ಗಳ ಬಳಕೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವ ಅನುಮತಿ ಕಡ್ಡಾಯವಾಗಿದ್ದು, ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು–2000 ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೊಸ ವರ್ಷಾಚರಣೆಯ ಸಂದರ್ಭ ಯಾವುದೇ ರೀತಿಯ ನಿಷೇಧಿತ ಮಾದಕ ವಸ್ತುಗಳ ಸಂಗ್ರಹಣೆ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನಗಳು, ಜೂಜು ಹಾಗೂ ಇತರ ಅನೈತಿಕ ಚಟುವಟಿಕೆಗಳನ್ನು ನಡೆಸುವುದಕ್ಕೂ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ. ಮದ್ಯ ಮಾರಾಟ ಮತ್ತು ವಿತರಣೆಗೆ ಸ್ಥಳೀಯ ಅಬಕಾರಿ ಇಲಾಖೆಯಿಂದ ಮಾನ್ಯ ಅನುಮತಿ ಪಡೆದಿರಬೇಕು.

ಆಯೋಜಕರು ಸಂಬಂಧಿತ ಇಲಾಖೆಯಿಂದ ಪಡೆದ ಲೈಸನ್ಸ್ ಹಾಗೂ ಅನುಮತಿಗಳಲ್ಲಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದ್ದು, ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಅಗ್ನಿಶಾಮಕ ಸಾಧನಗಳು, ತುರ್ತು ವೈದ್ಯಕೀಯ ವಾಹನಗಳು ಹಾಗೂ ಇತರ ಭದ್ರತಾ ವ್ಯವಸ್ಥೆಗಳನ್ನು ಒದಗಿಸಬೇಕು. ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯವಾಗಿದೆ. ಮದ್ಯ ವಿತರಣೆ ಇರುವ ಕಾರ್ಯಕ್ರಮಗಳಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಬಸ್ ನಿಲ್ದಾಣಗಳು, ಉದ್ಯಾನಗಳು, ಕ್ರೀಡಾಂಗಣಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಂಭ್ರಮಾಚರಣೆಯ ನೆಪದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಕಿರುಕುಳ, ಚುಡಾಯಿಕೆ, ಹಿಂಸಾಚಾರ ಅಥವಾ ಆಶ್ಲೀಲ ವರ್ತನೆಗಳನ್ನು ತಡೆಗಟ್ಟಲು ವಿಶೇಷ ಕಾರ್ಯಪಡೆಗಳನ್ನು ನಿಯೋಜಿಸಲಾಗುತ್ತದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ಹಾಗೂ ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಮಂಗಳೂರು ನಗರದಾದ್ಯಂತ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತದೆ. ನಿಯಮ ಉಲ್ಲಂಘಿಸಿದ ವಾಹನಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ.

ವೀಲಿಂಗ್, ಡ್ರಾಗ್ ರೇಸಿಂಗ್, ಸ್ಟಂಟ್‌ಗಳು, ಅತಿವೇಗ ಚಾಲನೆ ಹಾಗೂ ಅತಿಯಾದ ಶಬ್ದ ಉತ್ಪಾದಿಸುವ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇವುಗಳನ್ನು ತಡೆಗಟ್ಟಲು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಲಿವೆ. ಹೊಸ ವರ್ಷದ ನೆಪದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡುವ ರೀತಿಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದಕ್ಕೂ ನಿಷೇಧ ವಿಧಿಸಲಾಗಿದೆ.

ಈ ಮಾರ್ಗಸೂಚಿಗಳನ್ನು ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯ ಹಿತಕ್ಕಾಗಿ ಜಾರಿಗೊಳಿಸಲಾಗಿದ್ದು, ಶಾಂತ ಹಾಗೂ ಸಂತೋಷಕರ ಹೊಸ ವರ್ಷಾಚರಣೆಗೆ ನಾಗರಿಕರು ಮತ್ತು ಆಯೋಜಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

error: Content is protected !!