ಉಡುಪಿ: ಕೆನಡಾದಲ್ಲಿ ಉದ್ಯೋಗದಲ್ಲಿದ್ದ ವರನಿಗೆ ರಜೆ ಸಿಗದ ಹಿನ್ನೆಲೆಯಲ್ಲಿ ವಧೂ-ವರರು ವೀಡಿಯೋ ಕಾಲ್ ಮೂಲಕ ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಘಟನೆ ಉಡುಪಿಯ ಚಿಟ್ಪಾಡಿಯ ಸರಸ್ವತಿ ಸಭಾಭವನದಲ್ಲಿ ನಡೆದಿದೆ.

ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಸುಹಾಸ್ ಎಸ್. ಹಾಗೂ ಉಡುಪಿಯ ಮೇಘಾ ಅವರು ಸಂಪ್ರದಾಯದಂತೆ ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡವರು.
ಸುಹಾಸ್‌ಗೆ ಕೆಲಸದ ಒತ್ತಡದಿಂದಾಗಿ ಬರಲು ಸಾಧ್ಯವಾಗದ ಕಾರಣ ಕುಟುಂಬಸ್ಥರ ಒಪ್ಪಿಗೆ ಪಡೆದು ಆನ್‌ಲೈನ್ ಅಲ್ಲಿಯೇ ನಿಶ್ಚಿತಾರ್ಥ ನಡೆದಿದ್ದು, ಮೇಘಾ ಮತ್ತು ಕುಟುಂಬದ ಸದಸ್ಯರು, ಸಂಬಂಧಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಉಡುಪಿಯಲ್ಲಿ ಬೆಳಗ್ಗೆ ನಿಶ್ಚಿತಾರ್ಥ ನಡೆದರೆ ಆಗ ಕೆನಡಾದಲ್ಲಿ ಮಧ್ಯರಾತ್ರಿಯಾಗಿದ್ದು, ಸುಹಾಸ್ ಕೆಮರಾ ಎದುರು ಉಂಗುರ ತೋರಿಸಿ ನಿಶ್ಚಿತಾರ್ಥ ಮಾಡಿಕೊಂಡರು. ಹಿರಿಯರು ಕೆಮರಾದ ಮೂಲಕವೇ ವಧೂ-ವರರಿಗೆ ಆರತಿ ಬೆಳಗಿ, ಮಂತ್ರಾಕ್ಷತೆ ಹಾಕಿ ಶುಭಾಶಯ ಕೋರಿದರು.