ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಂತರ್‌ರಾಜ್ಯ ಸರಗಳವು, ವಾಹನ ಚೋರರು ಅರೆಸ್ಟ್

ಮಂಗಳೂರು: ಅಂತಾರಾಜ್ಯ ವಾಹನ ಕಳವು ಹಾಗೂ ಸರಗಳವು ಆರೋಪಿಗಳನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ನ್ಯೂತೋಟ ನಿವಾಸಿ ಪೈಸಲ್ @ ತೋಟ ಪೈಸಲ್ ಹಾಗೂ ಮೈಸೂರು ವಿನಾಯಕ ನಗರ ಪಡುವಾರಳ್ಳಿ ನಿವಾಸಿ ನಿತಿನ್‌ ಕುಮಾರ್‌ ಬಂಧಿತ ಆರೋಪಿಗಳು.

ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್‌ ಪಾರ್ಕಿಂಗ್‌ ಬಳಿ ನಿಲ್ಲಿಸಿದ್ದ ಯಮಹಾ ಎಫ್‌ಝಡ್‌ (KA-19-ER-7755) ಮೋಟಾರ್‌ಸೈಕಲ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.12ರಂದು ಕದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಡಿ. 16ರಂದು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ವಿಚಾರಣೆ ವೇಳೆ, ಆರೋಪಿಗಳು ದಿನಾಂಕ ಡಿ.13ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಗರ್ಡಿ ಹಿತ್ಲು ಬೆಳಕೆ ಪ್ರದೇಶದಲ್ಲಿ ವಾಸವಿದ್ದ 70 ವರ್ಷದ ವಯೋವೃದ್ಧ ಮಹಿಳೆ ಹೊನ್ನಮ್ಮ ಮಹಾದೇವ ನಾಯ್ಕ್ ಅವರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ಒಂದು ಚಿನ್ನದ ಸರವನ್ನು (ಅಂದಾಜು ಮೌಲ್ಯ ರೂ. 1,20,000) ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್‌ನ್ನು (ಅಂದಾಜು ಮೌಲ್ಯ ರೂ. 45,000) ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೈಸಲ್ @ ತೋಟ ಪೈಸಲ್ ವಿರುದ್ಧ ಉಡುಪಿ (ಕಾರ್ಕಳ, ಮಣಿಪಾಲ), ಮಂಗಳೂರು, ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ, ಪುತ್ತೂರು, ಶಿರ್ವ, ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿ (ಕುಶಾಲನಗರ) ಸೇರಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ರಾಬರಿ, ದರೋಡೆ, ಕಳ್ಳತನ ಮತ್ತು ಕೊಲೆ ಪ್ರಕರಣ ಸೇರಿ ಸುಮಾರು 42ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 10ಕ್ಕಿಂತಲೂ ಹೆಚ್ಚು ಜಾಮೀನು ರಹಿತ ವಾರಂಟ್‌ಗಳು ಜಾರಿಯಲ್ಲಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದನು.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ನಿರೀಕ್ಷಕ ಅನಂತ ಪದ್ಮನಾಭ, ಪಿಎಸ್ಐ ಮನೋಹರ್ ಪ್ರಸಾದ್, ಎಎಸ್‌ಐಗಳಾದ ಚಂದ್ರಶೇಖರ್, ಸುಧಾಕರ್ ರಾವ್, ರಾಜಶೇಖರ್, ಹೆಡ್‌ಕಾನ್ಸ್ಟೇಬಲ್‌ಗಳಾದ ಲೋಕೇಶ್, ಸಂತೋಷ್, ಡಿ.ಕೆ. ಸುರೇಶ್, ದಿಲೀಪ್, ಮೋಹನ್, ಮಲ್ಲಪ್ಪ ಬಿ., ಪೊಲೀಸ್‌ ಕಾನ್ಸ್ಟೇಬಲ್‌ಗಳಾದ ಸುನಿಲ್, ಮಣಿಕಂಠ, ಮೌಲಾ ಅಹಮ್ಮದ್, ಮಂಜುನಾಥ ವಡ್ಡರ ಹಾಗೂ ಕದ್ರಿ ಪೊಲೀಸ್‌ ಠಾಣೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

error: Content is protected !!