ಬೆಂಗಳೂರು: ಚಿಂದಿ ಆಯುತ್ತಿದ್ದ ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಯನ್ಮಾರ್ ದೇಶದ ಜಹಂಗೀರ್ ಆಲಂ ಹಲ್ಲೆಗೊಳಗಾದವರು. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ಪುನೀತ್ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.
ಜಹಂಗೀರ್ ಆಲಂ, ಪತ್ನಿ ಮತ್ತು ಮಕ್ಕಳೊಂದಿಗೆ ಹಲವು ವರ್ಷಗಳಿಂದ ಕಗ್ಗಲಿಪುರದಲ್ಲಿ ನೆಲಸಿದ್ದಾರೆ. ಅವರಿಗೆ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯು (ಯುಎನ್‍ಎಚ್‍ಸಿಆರ್) ನಿರಾಶ್ರಿತರ ಗುರುತಿನ ಚೀಟಿ ನೀಡಲಾಗಿದೆ.

ಜಹಂಗೀರ್ ಆಲಂ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ನಾಯಂಡಹಳ್ಳಿ, ಬನಶಂಕರಿ, ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುತ್ತಾರೆ. ಡಿ.3ರಂದು ರಾತ್ರಿ ಚನ್ನಮ್ಮನಕೆರೆ ಅಚ್ಚುಕಟ್ಟು ಭಾಗದಲ್ಲಿ ಚಿಂದಿ ಆಯುವಾಗ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ಅಲ್ಲಿಗೆ ಬಂದು ಜಹಂಗೀರ್ ಆಲಂನನ್ನು ನಿಂದಿಸಿದ್ದಾರೆ. ಬಾಂಗ್ಲಾ ನುಸುಳುಕೋರ ಎಂದು ಭಾವಿಸಿ ಜಹಂಗೀರ್ ಅವರನ್ನು ಎಳೆದಾಡಿ, ಹಲ್ಲೆ ನಡೆಸಿದ್ದರು.
ಈ ಸಂಬಂಧ ಜಹಂಗೀರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
