ಎಲ್‌ಪಿಜಿ ಕೊರತೆ: ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಲೇವಡಿ – ‌ʻಬೇಲಿಯೇ ಹೊಲ ಮೇದಂತೆ’ ಎಂದ ರಾಜಗೋಪಾಲ್ ರೈ

ಮಂಗಳೂರು: ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ನಿಜವಾದರೂ, ರಾಜ್ಯದ ಕಾಂಗ್ರೆಸ್ ಸರಕಾರ ಎಲ್‌ಪಿಜಿ ಹಾಗೂ ಇಂಧನಗಳ ಕಾಳಸಂತೆಕೋರರನ್ನು ಮಟ್ಟಹಾಕುವುದು ಬಿಟ್ಟು ಬೀದಿಗಳಿದು ಪ್ರತಿಭಟನೆ ಮಾಡುವುದು ಅವಿವೇಕತನದ ಪರಮಾವಧಿ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ರಾಜಗೋಪಾಲ್ ರೈ ಟೀಕಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡದೆ, ಕೇಂದ್ರ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತ ಜನರನ್ನು ತಪ್ಪು ಹಾದಿಗೆಳೆಯುತ್ತಿದೆ ಎಂದು ಅವರು ಟೀಕಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ದೇಶವು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಸಹಿಸಲಾರದೆ ರಾಜಕೀಯ ಲಾಭಕ್ಕಾಗಿ ಇಂತಹ ವಿಚಾರಗಳನ್ನು ಮುಂದಿಟ್ಟುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಭಾರತ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಗಲ್ಫ್ ರಾಷ್ಟ್ರಗಳನ್ನು ಬಹುಪಾಲು ಅವಲಂಬಿಸಿಕೊಂಡಿದ್ದರೂ, ಕೇಂದ್ರ ಸರ್ಕಾರವು ಇಂಧನ ಆಮದು ಮೂಲಗಳನ್ನು ವಿಸ್ತರಿಸಿದೆ. ರಷ್ಯಾ ಹಾಗೂ ಆಫ್ರಿಕಾದ ಕೆಲವು ದೇಶಗಳೊಂದಿಗೆ ಇಂಧನ ವ್ಯಾಪಾರ ವಿಸ್ತರಣೆ ಮಾಡಿರುವುದರಿಂದ ಸರಬರಾಜಿನಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದರು.

ಯುದ್ಧದಂತಹ ಸಂದರ್ಭಗಳಲ್ಲಿ ಇಂಧನ ಸರಬರಾಜಿನಲ್ಲಿ ಕೆಲಮಟ್ಟಿನ ವ್ಯತ್ಯಯ ಉಂಟಾಗುವುದು ಸಹಜ. ಇದರ ಪರಿಣಾಮವಾಗಿ ಹೋಟೆಲ್ ಮತ್ತು ಆತಿಥ್ಯ ಕ್ಷೇತ್ರಗಳಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರ ಹಾಗೂ ಎಲ್‌ಪಿಜಿ ಮಾರಾಟ ಸಂಸ್ಥೆಗಳ ಜತೆ ಸಮನ್ವಯ ಸಾಧಿಸಿಕೊಂಡು ಪೂರೈಕೆಯನ್ನು ಅಬಾಧಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ಬೇಲಿಯೇ ಎದ್ದು ಹೊಲ ಮೇದಂತೆ ಆಗುತ್ತದೆ ಎಂದು ಅವರು ಟೀಕಿಸಿದರು.

error: Content is protected !!