ಹುಬ್ಬಳ್ಳಿ: ಬಿಜೆಪಿಯೊಳಗೆ ಬಂಡಾಯದ ಬಾಂಬ್ ಸಿಡಿದಿದೆ! ಪಕ್ಷದ ಕಾರ್ಯಕರ್ತರಿಗೆ ಶಿಸ್ತಿನ ಪಾಠ ಮಾಡಬೇಕಿದ್ದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಅವರೇ ಈಗ ಪಕ್ಷದ ವಿರುದ್ಧ ರಣಕಹಳೆ ಊದಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇ ತಡ, “ನನ್ನ ಶಿಸ್ತು ನನ್ನಲ್ಲೇ ಇರಲಿ” ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದ್ದಾರೆ.

ಮೂವತ್ತೇಳು ವರ್ಷಗಳ ಕಾಲ ಕಮಲದ ಕಣಕಣವನ್ನೂ ಉಸಿರಾಡಿದ ಈ ಹಿರಿಯ ಮುಖಂಡನಿಗೆ, ಈಗ “ನಿಷ್ಠಾವಂತರಿಗೆ ಬೆಲೆಯಿಲ್ಲ” ಎಂಬ ಸತ್ಯ ಜ್ಞಾನೋದಯವಾಗಿದೆ! ಎಸ್.ವಿ. ಸಂಕನೂರ ಅವರಿಗೆ ಟಿಕೆಟ್ ನೀಡಿರುವುದನ್ನು ಕಂಡು ಕೆರಳಿರುವ ಪಾಟೀಲ್, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಖಡಕ್ ಪತ್ರ ರವಾನಿಸಿ, “ನನ್ನನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ” ಎಂದು ಕೇಳಿಕೊಂಡಿದ್ದಾರೆ.

ಲಿಂಗರಾಜ ಪಾಟೀಲ್ ಸುಮ್ಮನೆ ಕುಳಿತಿಲ್ಲ; ಪಕ್ಷಕ್ಕೆ ಎಂಟು ದಿನಗಳ ಕಾಲಮಿತಿ ಕೊಟ್ಟಿದ್ದಾರೆ. “ಈಗಲೂ ಕಾಲ ಮಿಂಚಿಲ್ಲ, ನನ್ನನ್ನು ಕಡೆಗಣಿಸಬೇಡಿ” ಎಂಬ ಎಚ್ಚರಿಕೆಯ ಜೊತೆಗೆ, “ಟಿಕೆಟ್ ಸಿಗದಿದ್ದರೆ ನನ್ನ ದಾರಿ ನನಗೆ” ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಂದರೆ, ಎಂಟು ದಿನದ ನಂತರ ಕೇಸರಿ ಶಾಲು ಕಳಚಿ ಬೀಳುವ ಸಾಧ್ಯತೆ ದಟ್ಟವಾಗಿದೆ.

37 ವರ್ಷ ದುಡಿದ ನನಗೆ ಅನ್ಯಾಯವಾಗಿದೆ, ಹೊರಗಿನಿಂದ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂಬುದು ಪಾಟೀಲ್ ಅವರ ನೇರ ಆರೋಪ. ದ್ಯಕ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಶೀಘ್ರದಲ್ಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್ ಬೈ ಹೇಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಶಿಸ್ತು ಸಮಿತಿ ಅಧ್ಯಕ್ಷರೇ ಅಸಮಾಧಾನಗೊಂಡು ರಾಜೀನಾಮೆ ನೀಡುತ್ತಿರುವುದು ಹುಬ್ಬಳ್ಳಿ-ಧಾರವಾಡ ಭಾಗದ ಬಿಜೆಪಿಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
