ಬೆವರು ಸುರಿಸುವುದು ದೇಹಕ್ಕೆ ಒಳ್ಳೆಯದು, ಆದರೆ ಅದರ ನಂತರ ಬರುವ ವಾಸನೆ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ನಿಮಗೆ ಗೊತ್ತೇ? ನಿಜವಾಗಿ ಬೆವರಿನಲ್ಲಿ ಯಾವುದೇ ವಾಸನೆ ಇರುವುದಿಲ್ಲ! ಹೌದು, ಬೆವರು ಒಂದು ಬಣ್ಣವಿಲ್ಲದ, ವಾಸನೆಯಿಲ್ಲದ ಉಪ್ಪು ಮಿಶ್ರಿತ ದ್ರವ ಅಷ್ಟೇ. ಹಾಗಾದರೆ ಮೈಯಿಂದ ದುರ್ವಾಸನೆ ಬರುವುದು ಯಾಕೆ? ಇಲ್ಲಿದೆ ಅದರ ಸಂಪೂರ್ಣ ವಿವರ.

ವಾಸನೆಗೆ ಕಾರಣ ಬ್ಯಾಕ್ಟೀರಿಯಾಗಳ ಔತಣ!
ನಮ್ಮ ಚರ್ಮದ ಮೇಲೆ ನೈಸರ್ಗಿಕವಾಗಿ ಕೋಟ್ಯಂತರ ಬ್ಯಾಕ್ಟೀರಿಯಾಗಳಿರುತ್ತವೆ. ನಾವು ಬೆವಂತ್ತಿದ್ದಂತೆ, ಈ ಬ್ಯಾಕ್ಟೀರಿಯಾಗಳು ಬೆವರಿನಲ್ಲಿರುವ ಪ್ರೋಟೀನ್ ಮತ್ತು ಕೊಬ್ಬಿನಂಶಗಳನ್ನು ತಿನ್ನಲು ಆರಂಭಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಅವು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಈ ರಾಸಾಯನಿಕಗಳು ಗಾಳಿಯಲ್ಲಿ ಆವಿಯಾದಾಗ ನಮಗೆ ಮೈವಾಸನೆ ತಿಳಿಯುತ್ತದೆ.
ನಮ್ಮ ದೇಹದಲ್ಲಿ ಮೂರು ವಿಧದ ಬೆವರಿನ ಗ್ರಂಥಿಗಳಿವೆ:
ಎಕ್ರೈನ್ ಗ್ರಂಥಿಗಳು (Eccrine): ಇವು ದೇಹದಾದ್ಯಂತ ಇರುತ್ತವೆ ಮತ್ತು ಇವುಗಳಿಂದ ಬರುವ ಬೆವರು ಕೇವಲ ನೀರು ಮತ್ತು ಉಪ್ಪಿನಿಂದ ಕೂಡಿರುತ್ತದೆ. ಹಾಗಾಗಿ ಇದರಿಂದ ವಾಸನೆ ಕಡಿಮೆ.
ಅಪೊಕ್ರೈನ್ ಗ್ರಂಥಿಗಳು (Apocrine): ಇವು ಹೆಚ್ಚಾಗಿ ಕಂಕುಳು ಮತ್ತು ಜನನಾಂಗದ ಭಾಗಗಳಲ್ಲಿರುತ್ತವೆ. ಇಲ್ಲಿನ ಬೆವರು ದಪ್ಪವಾಗಿದ್ದು, ಪ್ರೋಟೀನ್ ಮತ್ತು ಸಕ್ಕರೆಯಂಶದಿಂದ ಕೂಡಿರುತ್ತದೆ. ಬ್ಯಾಕ್ಟೀರಿಯಾಗಳಿಗೆ ಇದು ನೆಚ್ಚಿನ ಆಹಾರ, ಹಾಗಾಗಿ ಈ ಭಾಗಗಳಲ್ಲಿ ವಾಸನೆ ಹೆಚ್ಚು.
ಅಪೊಯೆಕ್ರೈನ್ ಗ್ರಂಥಿಗಳು: ಇವು ಕೂಡ ಕಂಕುಳ ಭಾಗದಲ್ಲಿ ಕಂಡುಬರುತ್ತವೆ.
ಈರುಳ್ಳಿ ವಾಸನೆಗೂ ಬ್ಯಾಕ್ಟೀರಿಯಾಗೂ ಏನು ಸಂಬಂಧ?
ನಮ್ಮ ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳ ವಿಧಕ್ಕೆ ಅನುಗುಣವಾಗಿ ವಾಸನೆ ಬದಲಾಗುತ್ತದೆ. ಸ್ಟ್ಯಾಫಿಲೋಕೊಕಸ್ ಹೋಮಿನಿಸ್ ವೈರಸ್ ಇದು ಕಂಕುಳಲ್ಲಿದ್ದರೆ ಈರುಳ್ಳಿಯಂತಹ ವಾಸನೆ ಬರುತ್ತದೆ. ಕೊರಿನೆಬ್ಯಾಕ್ಟೀರಿಯಂ ಇದು ಪ್ರೋಟೀನ್‌ಗಳನ್ನು ವಿಭಜಿಸಿದಾಗ ಗಿಣ್ಣು (Cheese) ಅಥವಾ ಮೇಕೆಯ ವಾಸನೆಯನ್ನು ಹೋಲುವ ವಾಸನೆ ಬರಬಹುದು.

ವಾಸನೆ ತಡೆಯುವುದು ಹೇಗೆ?
ನಿಯಮಿತ ಸ್ನಾನ ಮತ್ತು ಬೆವತ ತಕ್ಷಣ ಬಟ್ಟೆ ಬದಲಿಸುವುದು ಮುಖ್ಯ. ಬಟ್ಟೆಯ ಎಳೆಗಳು ಬ್ಯಾಕ್ಟೀರಿಯಾ ಮತ್ತು ಬೆವರನ್ನು ಹಿಡಿದಿಟ್ಟುಕೊಳ್ಳುತ್ತವೆ. ಡಿಯೋಡರೆಂಟ್‌ಗಳು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ ಮತ್ತು ಸುಗಂಧ ನೀಡುತ್ತವೆ. ಆದರೆ ಆಂಟಿಪರ್ಸ್ಪಿರಂಟ್‌ಗಳು ಅಲ್ಯೂಮಿನಿಯಂ ಲವಣಗಳ ಸಹಾಯದಿಂದ ಬೆವರಿನ ರಂಧ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಬೆವರುವಿಕೆಯನ್ನೇ ಕಡಿಮೆ ಮಾಡುತ್ತವೆ.

ಕೆಲವು ಆಸಕ್ತಿದಾಯಕ ಸಂಗತಿಗಳು:
-ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸಿದಾಗ ಅವುಗಳ ಅಂಶ ರಕ್ತದ ಮೂಲಕ ಬೆವರಿನಲ್ಲಿ ಸೇರಿ ವಾಸನೆಯನ್ನು ಬದಲಿಸಬಹುದು.
-ಸಾಮಾನ್ಯವಾಗಿ ಪುರುಷರಲ್ಲಿ ಬೆವರಿನ ಗ್ರಂಥಿಗಳು ದೊಡ್ಡದಾಗಿರುತ್ತವೆ, ಹಾಗಾಗಿ ಅವರು ಹೆಚ್ಚು ಬೆವರುತ್ತಾರೆ ಮತ್ತು ವಾಸನೆಯೂ ತೀವ್ರವಾಗಿರುತ್ತದೆ.
-ಒಂದು ವೇಳೆ ಬೆವರು ಸ್ವೀಟ್‌ನಂತೆ ವಾಸನೆ ಬರುತ್ತಿದ್ದರೆ ಅದು ಡಯಾಬಿಟಿಸ್ ಲಕ್ಷಣವಿರಬಹುದು. ಮೀನಿನ ವಾಸನೆ ಬರುತ್ತಿದ್ದರೆ ಅದು ಕೆಲವು ಅನುವಂಶಿಕ ಸಮಸ್ಯೆಯಿರಬಹುದು.
ನೆನಪಿರಲಿ: ಬೆವರಿನ ಮೂಲಕ ದೇಹದ ವಿಷಕಾರಿ ಅಂಶಗಳು (Toxins) ಹೊರಹೋಗುತ್ತವೆ ಎಂಬುದು ತಪ್ಪು ಕಲ್ಪನೆ. ಆ ಕೆಲಸವನ್ನು ಯಕೃತ್ತು (Liver) ಮತ್ತು ಮೂತ್ರಪಿಂಡಗಳು (Kidneys) ಮಾಡುತ್ತವೆ. ಬೆವರಿನ ಮುಖ್ಯ ಕೆಲಸ ದೇಹದ ತಾಪಮಾನವನ್ನು ತಂಪಾಗಿಸುವುದು ಮಾತ್ರ.
