ಮಂಗಳೂರು: ತನಗೆ ಮದುವೆ ಇಷ್ಟವಿಲ್ಲ ಎಂದು ಮನೆಯವರ ಬಳಿ ಹೇಳಿದ್ದರೂ ಮದುವೆಗೆ ಸಿದ್ಧತೆ ನಡೆಸುತ್ತಿರುವುದನ್ನು ಕಂಡ ಯುವಕನೋರ್ವ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜಪ್ಪು ಮಾರ್ಕೆಟ್ ಅರೆಕರೆಬೈಲ್ ನಿವಾಸಿ ಜಯಂತ್ ಕುಮಾರ್ ಅವರ ಪುತ್ರ ರಕ್ಷಣ್ ಜೆ.ಕೆ. (32) ನಾಪತ್ತೆಯಾದವರು.

ಡಿ.6ರಂದು ಸ್ನೇಹಿತರು, ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರ ಕೊಡುವುದಾಗಿ ರಕ್ಷಣ್ ಬೆಳಗ್ಗೆ 11.30ರ ವೇಳೆಗೆ ಕಾರಿನಲ್ಲಿ ತೆರಳಿದ್ದ. ಮಧ್ಯಾಹ್ನ ಸುಮಾರು 1.30ಕ್ಕೆ ತಾಯಿಗೆ ಕರೆ ಮಾಡಿ ಅರ್ಧ ಗಂಟೆಯಲ್ಲಿ ಬರುವುದಾಗಿ ತಿಳಿಸಿದ್ದ ರಕ್ಷಣ್ ವಾಪಸ್ ಬಂದಿರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ, ಸಂದೇಶ ಕಳಿಸಿದರೂ ನೋಡಿಲ್ಲ. ಆದರೆ ರಾತ್ರಿ 10.30ರ ವೇಳೆಗೆ ಟೌನ್ ಹಾಲ್ ಬಳಿಕ ಕಾರು ಪತ್ತೆಯಾಗಿತ್ತು. ಆದರೆ ಕಾರು ಲಾಕ್ ಆಗಿತ್ತು. ಸಂಬಂಧಿಕರು, ಸ್ನೇಹಿತರಲ್ಲಿ ವಿಚಾರಿಸಿದರೂ ರಕ್ಷಣ್ ಪತ್ತೆಯಾಗಿರಲಿಲ್ಲ. ಹೀಗಾಗಿ ಮನೆಮಂದಿ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು.
ಡಿ. 7ರಂದು ರಕ್ಷಣ್ ಗೆ ಮೆಹಂದಿ ಕಾರ್ಯಕ್ರಮ ಕೂಡ ನಡೆಯುವುದರಲ್ಲಿತ್ತು. ಆದರೆ ಯುವಕ ತನಗೆ ಮದುವೆ ಇಷ್ಟವಿಲ್ಲ ಎಂದು ಮನೆಯವರ ಬಳಿ ಹೇಳಿದ್ದರೂ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಶನಿವಾರ ಮನೆಯಿಂದ ತೆರಳಿದ್ದ ಅವರು ಮಧ್ಯಾಹ್ನದ ರೈಲಿನಲ್ಲಿ ಚೆನ್ನೈಗೆ ಹೋಗಿದ್ದಾರೆ. ಸೋಮವಾರ ಮೊಬೈಲ್ ಕರೆ ಸ್ವೀಕರಿಸಿದ್ದು, ತಾನು ಚೆನ್ನೈಯಲ್ಲಿರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಲೋಕೇಷನ್ ಸರ್ಚ್ ಮಾಡಿದಾಗ ಚೆನ್ನೈಯಲ್ಲಿರುವುದು ದೃಢಪಟ್ಟಿದ್ದಾಗಿ ತಿಳಿದುಬಂದಿದೆ.
