ಕ್ರಿಸ್ಮಸ್ ಸಮಯದಲ್ಲಿ ಕೇರಳದ ಮನೆಗಳಲ್ಲಿ ಹಬ್ಬದ ಪರಿಮಳವನ್ನು ಎಲ್ಲೆಡೆ ಹರಡುವ ಶುಂಠಿ ವೈನ್, ಈಗ ಪ್ರತೀ ಮನೆಯಲ್ಲೂ ತಯಾರಿಸಬಹುದಾದಂತಹ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
800 ಗ್ರಾಂ ಶುಂಠಿ
1. 6 ಕೆಜಿ ಸಕ್ಕರೆ
2 ವೆಲೆನ್ಸಿಯಾ ಕಿತ್ತಳೆ
2 ನಿಂಬೆಹಣ್ಣು
5 ಲವಂಗ
15 ಗ್ರಾಂ ಯೀಸ್ಟ್
4 ಲೀಟರ್ ನೀರು
ತಯಾರಿಸುವ ವಿಧಾನ:
ಒಂದು ದೊಡ್ಡ ಪಾತ್ರೆಯಲ್ಲಿ ಶುಂಠಿಯನ್ನು ಪುಡಿಮಾಡಿ ನಾಲ್ಕು ಲೀಟರ್ ನೀರಿಗೆ ಸಕ್ಕರೆ ಸೇರಿಸಿ ಕೈಯಾಡಿಸುವ ಮೂಲಕ ಕರಗಿಸಿಕೊಳ್ಳಿ. ನಂತರ ಕಿತ್ತಳೆ ಹಣ್ಣುಗಳನ್ನು ಹೋಳು ಮಾಡಿ ಅದರಲ್ಲಿ ಹಾಕಿ. ಎರಡೂ ನಿಂಬೆಹಣ್ಣಿನ ರಸವನ್ನು ಅದಕ್ಕೆ ಹಿಂಡಿ ಮತ್ತು ಲವಂಗ ಹಾಕಿ ಈ ಮಿಶ್ರಣವನ್ನು 30 ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು.
ಸ್ಟವ್ ಆಫ್ ಮಾಡಿದ ಬಳಿಕ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಯೀಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಶುದ್ಧವಾದ ಸೆರಾಮಿಕ್ ಅಥವಾ ಗಾಜಿನ ಜಾರ್‌ನಲ್ಲಿ ಸಂಗ್ರಹಿಸಿಡಬೇಕು. ಜಾರ್‌ನ ಬಾಯಿಯನ್ನು ಬಟ್ಟೆಯಿಂದ ಮುಚ್ಚಿ ಸುರಕ್ಷಿತವಾಗಿ ಕಟ್ಟಿಕೊಳ್ಳುವು ಅತ್ಯಗತ್ಯವಾಗಿದೆ.
15 ದಿನಗಳವರೆಗೆ ದಿನಕ್ಕೆ ಒಂದು ಬಾರಿ ಜಾರ್ ನ ಬಾಯಿ ತೆಗೆದು ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮತ್ತೆ ಮುಚ್ಚಿಡಬೇಕು. ಇದು ಹುದುಗುವಿಕೆ ಪ್ರಕ್ರಿಯೆಯು ಸಮವಾಗಿ ಪರಿಮಳವನ್ನು ಪಡೆಯಲು ಸಹಾಯ ಮಾಡುತ್ತದೆ. 15 ದಿನಗಳ ನಂತರ, ಬೆರೆಸುವುದನ್ನು ನಿಲ್ಲಿಸಿ ಜಾರ್ ಅನ್ನು ಗಾಳಿಯಾಡದಂತೆ ಮುಚ್ಚಿ 15 ದಿನಗಳವರೆಗೆ ಬಿಡಬೇಕು.
ಕೊನೆಯಲ್ಲಿ ಜಾರ್ ನಲ್ಲಿ ಸಂಗ್ರಹಿಸಿಟ್ಟಿರುವ ಮಿಶ್ರಣವನ್ನು ಅಲುಗಾಡದಂತೆ ಮೇಲಿನ ಶುದ್ಧ ದ್ರವವನ್ನು ಶುದ್ಧವಾದ ಗಾಜಿನ ಬಾಟಲಿಗಳಿಗೆ ವರ್ಗಾಯಿಸಿಕೊಂಡರೆ ಪರಿಮಳಯುಕ್ತ ಶೂಂಠಿ ವೈನ್ ಮನೆಯಲ್ಲೇ ತಯಾರಾಗುತ್ತೆ.