ಬೆಳಗಾವಿ: “ಪರಪುರುಷನ ನಂಬಬೇಡ ಓ ನಾರಿಯೇ… ಪರನಾರಿಯ ನಂಬಬೇಡ ಓ ಪುರುಷನೇ…” ಎಂಬ ಮಾತಿಗೆ ಸಾಕ್ಷಿಯಾದ ಎರಡು ಬೆಚ್ಚಿಬೀಳಿಸುವ ಘಟನೆಗಳು ಬೆಳಗಾವಿಯಲ್ಲಿ ಬೆಳಕಿಗೆ ಬಂದಿವೆ. ಹಣದ ಆಸೆಗೆ ಬಿದ್ದು ಗಂಡ-ಹೆಂಡತಿಯನ್ನೇ ಬಿಟ್ಟು ಒಂದಾದ ಜೋಡಿ ಹಾಗೂ ಮಹಿಳಾ ಅಧಿಕಾರಿಯ ಬೆಡ್‌ರೂಮ್‌ಗೆ ನುಗ್ಗಿದ ಐನಾತಿ ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದೆ.

ಇವನು ಹೆಂಡತಿಯನ್ನು ಬಿಟ್ಟವನು, ಅವಳು ಗಂಡನನ್ನು ಬಿಟ್ಟವಳು! ಇಬ್ಬರೂ ಒಂದಾಗಿದ್ದು ಪ್ರೀತಿಸಲಿಕ್ಕಲ್ಲ, ಬದಲಾಗಿ ಶ್ರೀಮಂತ ಕುಳಗಳಿಗೆ ಆಮಿಷವೊಡ್ಡಿ ಬರ್ಬಾದ್ ಮಾಡಲು. ಫಿನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ, ಅಲ್ಲಿಗೆ ಬರುತ್ತಿದ್ದ ಕೋಟ್ಯಧಿಪತಿಗಳ ಫೋನ್ ನಂಬರ್ ಸಂಗ್ರಹಿಸಿ ತನ್ನ ಗೆಳತಿಗೆ ನೀಡುತ್ತಿದ್ದ. ನಂತರ ಶುರುವಾಗುತ್ತಿತ್ತು ಅಸಲಿ ಆಟ. ಆಕೆ ಸೋಷಿಯಲ್ ಮೀಡಿಯಾದಲ್ಲಿ ಮಾಯಾಂಗನೆಯಂತೆ ಮೆಸೇಜ್ ಮಾಡಿ, ಹನಿ ಸವಿಯುವ ಮಾತಿನಿಂದ ಸಿರಿವಂತರನ್ನು ಹೋಟೆಲ್ ರೂಮ್‌ಗೆ ಕರೆಯುತ್ತಿದ್ದಳು. ಆಕೆಯ ಚೆಂದದ ಮಾತಿಗೆ ಮರುಳಾಗಿ ಹೋದವರು ಹಣ, ಮಾನ ಎರಡನ್ನೂ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದರು. ಆದರೆ, ʻಕಳ್ಳನಿಗೆ ಇರೋದು ಒಂದು ದಿನ’ ಎಂಬಂತೆ ಈ ಜೋಡಿ ಈಗ ಲಾಕಪ್ ಸೇರಿದೆ.

ಇದೇ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ದೀಪಾ ಎಂಬಾಕೆ ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಪೀಕುತ್ತಿದ್ದಳು. ಆದರೆ ಈಕೆಯ ಗ್ಯಾಂಗ್ ಮಾಡಿದ ಒಂದು ಎಡವಟ್ಟು ಇವರನ್ನು ಪೊಲೀಸರ ಕೈಗೆ ಸಿಗುವಂತೆ ಮಾಡಿದೆ. ಸುಮಾರು 20 ದಿನಗಳ ಹಿಂದೆ, ದೀಪಾ ಮತ್ತು ಆಕೆಯ ಗ್ಯಾಂಗ್ ಬೆಳಗಾವಿಯ ಓರ್ವ ಮಹಿಳಾ ಅಧಿಕಾರಿಯ ಮನೆಗೆ ನುಗ್ಗಿ, ಯಾರೂ ಇಲ್ಲದ ವೇಳೆ ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದರು. ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿ, “50 ಲಕ್ಷ ಕೊಡದಿದ್ದರೆ ವಿಡಿಯೋ ವೈರಲ್ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದರು. ಆದರೆ ಆ ಅಧಿಕಾರಿ ಹೆದರದೆ ಪೊಲೀಸರಿಗೆ ದೂರು ನೀಡುವ ಮೂಲಕ ಈ ಕಿರಾತಕರ ಜನ್ಮ ಜಾಲಾಡಿದ್ದಾರೆ.
