ಮಂಗಳೂರು: ಮಂಗಳೂರು ತಾಲೂಕಿನ ಮಳಲಿ ದೇವರಗುಡ್ಡೆ ಸೂರ್ಯನಾರಾಯಣ ದೇವಸ್ಥಾನದ ನಿರ್ಮಾಣ ಕಾರ್ಯ ಮಹತ್ವದ ಹಂತವನ್ನು ತಲುಪಿದ್ದು, ಹೊಸ ಗರ್ಭ ಗೃಹ ನಿರ್ಮಾಣದ ಪೂರ್ವಭಾವಿಯಾಗಿ ಷಢಾಧಾರ ಪ್ರತಿಷ್ಠೆಯು ಡಿಸೆಂಬರ್ 7ರ ಭಾನುವಾರ ಬೆಳಿಗ್ಗೆ 8.06ಕ್ಕೆ ಧನುರ್ಲಗ್ನ ಸುಮುಹೂರ್ತದಲ್ಲಿ ಸಾಂಪ್ರದಾಯಿಕ ವೈದಿಕ-ತಾಂತ್ರಿಕ ಕ್ರಮದೊಂದಿಗೆ ಭಕ್ತಿಭಾವದಿಂದ ನೆರವೇರಿತು. ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆದ ಈ ಪವಿತ್ರ ವಿಧಿಗೆ ನೂರಾರು ಭಕ್ತರು ಸಾಕ್ಷಿಯಾದರು.














ದೇವಾಲಯದಲ್ಲಿ ವಿಗ್ರಹವನ್ನು ಸ್ಥಾಪಿಸುವ ಮೊದಲು ಷಡಾಧಾರ ಪ್ರತಿಷ್ಠೆ ನಡೆಯುತ್ತದೆ. ಗರ್ಭಗುಡಿಯೊಳಗೆ ನಿಖರವಾಗಿ ಆಯ್ಕೆ ಮಾಡಿದ ಸ್ಥಳದಲ್ಲಿ ಒಂದು ರಂಧ್ರವನ್ನು ಅಗೆದು, ಆರು ಪವಿತ್ರ ವಸ್ತುಗಳು—ಸಾಮಾನ್ಯವಾಗಿ ಅಮೂಲ್ಯ ರತ್ನಗಳು ಹಾಗೂ ಶಕ್ತಿಯಿಂದ ಕೂಡಿದ ವಸ್ತುಗಳನ್ನು—ವೆದಿಕೆಯ ಅಡಿಪಾಯದೊಳಗೆ ಸ್ಥಾಪಿಸಲಾಗುತ್ತದೆ. ಈ ಆರು ರಚನೆಗಳೆಂದರೆ: ಆಧಾರಶಿಲೆ – ದೇವಾಲಯದ ಅಡಿಪಾಯದ ಶಿಲೆ, ನಿಧಿಕುಂಭ – ಅಮೂಲ್ಯ ಕಲ್ಲುಗಳ ಮಡಕೆ, ಅಷ್ಟದಲಪದ್ಮ – ಎಂಟು ದಳಗಳ ಕಮಲಾಕೃತಿ, ಕೂರ್ಮ – ಆಮೆಯ ರೂಪದ ಕಲ್ಲು, ಯೋಗನಾಳ – ತಾಮ್ರದ ಕೊಳವೆ ಹಾಗೂ ನಪುಂಸಕಶಿಲೆ – ತಟಸ್ಥ ಶಿಲೆ.
ಈ ಆರು ಅಂಶಗಳು ದೇವಾಲಯದ ಶಕ್ತಿಕೇಂದ್ರಗಳನ್ನು ಪ್ರತಿನಿಧಿಸುತ್ತವೆ. ಮಾನವನ ಸೂಕ್ಷ್ಮ ದೇಹದಲ್ಲಿ ಇರುವ ಆರು ಚಕ್ರಗಳಂತೆ, ದೇವಾಲಯದಲ್ಲೂ ಈ ಆರು ಸ್ಥಾಪಿತ ರಚನೆಗಳನ್ನು ದೈವಿಕ ಶಕ್ತಿಯ ಕೇಂದ್ರಗಳಾಗಿ ಪರಿಗಣಿಸಲಾಗುತ್ತದೆ. ಇದರ ಮೂಲಕ ದೇವಾಲಯ ನಿರ್ಮಿಸಲಾಗುವ ಸ್ಥಳ ಮತ್ತು ಸ್ಥಾಪಿಸಲಿರುವ ದೇವತೆ ನಡುವೆ ಆಧ್ಯಾತ್ಮಿಕ ಸೇತುವೆ ನಿರ್ಮಾಣವಾಗುತ್ತದೆ. ಷಡಾಧಾರ ಪ್ರತಿಷ್ಠೆಯು ಸ್ಥಳದ ಶಕ್ತಿಯನ್ನು ಶುದ್ಧೀಕರಿಸುವುದಲ್ಲದೆ, ಆ ಶಕ್ತಿಯನ್ನು ದೇವತೆಗನುಗುಣವಾಗಿ ಸಮನ್ವಯಗೊಳಿಸುವ ಅತ್ಯಂತ ಗಾಢವಾದ ಪ್ರಕ್ರಿಯೆಯಾಗಿದೆ.
ಇದನ್ನು ಪ್ರತಿಷ್ಠೆಗಳಲ್ಲಿಯೇ ಅತ್ಯಂತ ವಿರಳ ಮತ್ತು ಶ್ರೇಷ್ಠ ವಿಧಿಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ದೇವಾಲಯದ ಗರ್ಭಗುಡಿಯಲ್ಲಿ ದೈವಿಕ ಚೈತನ್ಯವನ್ನು ಆಕರ್ಷಿಸಿ ದೀರ್ಘಕಾಲ ಉಳಿಯುವಂತೆ ಮಾಡುವುದು ಈ ವಿಧಿಯ ಪ್ರಮುಖ ಉದ್ದೇಶವಾಗಿದೆ.
ನಿಧಿಕುಂಭದಲ್ಲಿ ಪಂಚಲೋಹ, ಬೀಜಗಳು, ನವರತ್ನ, ಧಾನ್ಯಗಳು ಹಾಗೂ ಮಂಗಳ ಚೈತನ್ಯಶಕ್ತಿಯನ್ನು ಸಂಕೇತಿಸುವ ವಸ್ತುಗಳನ್ನು ತುಂಬಿಸಲಾಗುತ್ತದೆ.
ಬೆಳಿಗ್ಗೆ 6.30ರಿಂದ ಪುಣ್ಯಾಹ, 7.30ರಿಂದ 8.00ರ ತನಕ ಭಜನೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಸದಸ್ಯರಿಂದ 108 ಸೂರ್ಯನಮಸ್ಕಾರ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ, ವಿಜ್ಞಾಪನಾ ಪತ್ರ ಬಿಡುಗಡೆ, ನಾಗಪೂಜೆ, ಬಾಲಾಲಯದಲ್ಲಿರುವ ದೇವರಿಗೆ ಮಹಾ ಪೂಜೆ, ಅನ್ನಸಂತರ್ಪಣೆ, ಸಂಜೆಯಿಂದ ಕಟೀಲು ಮೇಳದಿಂದ ಯಕ್ಷಗಾನ ಬಯಲಾಟ ನಡೆಯಿತು.
