ಮಂಗಳೂರು: ಕಳೆದ ಹಲವು ವರ್ಷಗಳಿಂದ ಆಯೋಜನೆಗೊಂಡು ಅಭೂತಪೂರ್ವ ಜನಮೆಚ್ಚುಗೆ ಗಳಿಸಿರುವ ಬೃಹತ್ ವೈನ್ ಮೇಳವು ಗ್ರಾಹಕರ ಬೇಡಿಕೆಯ ಹಿನ್ನೆಲೆಯಲ್ಲಿ ಡಿಸೆಂಬರ್ 6 ಮತ್ತು 7ರಂದು ನಗರದ ಕದ್ರಿ ಪಾರ್ಕ್‌ನಲ್ಲಿ ಭವ್ಯವಾಗಿ ನಡೆಯಲಿದೆ.

ರತ್ನಾಸ್ ವೈನ್ ಗೇಟ್, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (ಸರ್ಕಾರಿ ಸಂಸ್ಥೆ) ಹಾಗೂ ತೋಟಗಾರಿಕಾ ಇಲಾಖೆಗಳ ಸಹಯೋಗದಲ್ಲಿ ಬೆಳಗ್ಗೆ 10.30ರಿಂದ ರಾತ್ರಿ 9.30 ಗಂಟೆಯವರೆಗೆ ನಿರಂತರ ಕಾರ್ಯಕ್ರಮಗಳೊಂದಿಗೆ ರುಚಿ – ರಂಜನೆ – ರಿಯಾಯಿತಿ ಮುಂತಾದ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಮೇಳ ಸಜ್ಜಾಗಿದೆ.
ಈ ಮೇಳದಲ್ಲಿ ದ್ರಾಕ್ಷಾ ರಸದ ಆರೋಗ್ಯಕಾರಿ ಉಪಯೋಗಗಳು, ಸವಿಯುವ ಕ್ರಮ, ದಾಸ್ತಾನು ವಿಧಾನಗಳು ಸೇರಿದಂತೆ ಅಗತ್ಯ ಮಾಹಿತಿಗಳೊಂದಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ನೂರಾರು ಬ್ರಾಂಡ್‌ಗಳ ವೈನ್ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ಕಂಪನಿಗಳ ಹೊಸ ಸಂಗ್ರಹಗಳು, ತಾಜಾ ಪಾನೀಯಗಳು, ಮತ್ತು ಸವಿದು ಆಯ್ಕೆಮಾಡಿಕೊಳ್ಳುವ ವ್ಯವಸ್ಥೆ ಗ್ರಾಹಕರನ್ನು ಆಕರ್ಷಿಸುವ ಮುಖ್ಯ ವೈಶಿಷ್ಟ್ಯವಾಗಿದೆ.

ವೈನ್ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯುತ್ತಮ ಕೊಡುಗೆಗಳು, ಅತ್ಯಾಕರ್ಷಕ ರಿಯಾಯಿತಿ ದರಗಳು ಲಭ್ಯವಿದ್ದು, ವೈನ್ ಪ್ರಿಯರಿಗೆ ಖರೀದಿಗೆ ಸುವರ್ಣಾವಕಾಶವಾಗಿದೆ. ಮೇಳದ ಮನರಂಜನೆಗೂ ವಿಶೇಷ ಮೆರಗು—ಸಂಜೆ ವೇಳೆಯಲ್ಲಿ ಲೈವ್ ಟ್ರ್ಯಾಕ್ ಮ್ಯೂಸಿಕ್, ಮಕ್ಕಳಿಗಾಗಿ ವಿವಿಧ ಆಟೋಟ ಮತ್ತು ಸ್ಪರ್ಧೆಗಳು, ಹಾಗೂ ಕುಟುಂಬ ಸಮೇತರಾಗಿ ದಿನವಿಡೀ ಕಳೆಯಲು ಅನುಕೂಲಕರ ವಾತಾವರಣ ಸಿದ್ಧವಾಗಿದೆ.
ಸಂಘಟಕರು ಮಾತನಾಡಿ, “ಈ ಬಾರಿ ಮೇಳ ಇನ್ನಷ್ಟು ವೈವಿಧ್ಯಮಯ. ನೂತನ ಉತ್ಪನ್ನಗಳನ್ನು ಪರಿಚಯಿಸಿ, ಗ್ರಾಹಕರು ಅನುಭವಿಸುವಂತಹ ವಾತಾವರಣವನ್ನು ನಾವು ಸೃಷ್ಟಿಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಇದರ ಸದುಪಯೋಗ ಪಡೆಯಬೇಕೆಂದು ವಿನಂತಿಸಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.