ಉಡುಪಿ: ಮಲ್ಪೆಯಲ್ಲಿ ನಡೆದ ಹಿಂದೂ ಯುವ ಸೇನೆಯ ಮುಖಂಡ ಮಂಜು ಕೊಳ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅಮೃತ್ ಭಂಡಾರಿ, ಪ್ರಜ್ಞೇಶ್, ಪುನೀತ್ ಪೂಜಾರಿ, ಅಭಿಜಿತ್ ಮತ್ತು ಓರ್ವ ಅಪ್ರಾಪ್ತ ಹುಡುಗ ಬಂಧಿತ ಆರೋಪಿಗಳು. ಇವರುಗಳು ಗುಂಪು ಕಟ್ಟಿಕೊಂಡು, ಮಾರಕಾಸ್ತ್ರಗಳೊಂದಿಗೆ ಬಿಳಿ ಬಣ್ಣದ ಬೊಲೆರೊ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಆರೋಪಿ ಅಮೃತ್ ಭಂಡಾರಿ ಎಂಬಾತನ ತಂಗಿಯ ವಿಷಯಕ್ಕೆ ಸಂಬಂಧಿಸಿದ ವೈಯಕ್ತಿಕ ವಿಚಾರವಾಗಿ, ದೂರುದಾರ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ್ ಸಾಲ್ಯಾನ್(ಮಂಜು ಕೊಳ), ಧನುಷ್, ಲತೀಶ್ ಮತ್ತು ವರುಣ್ ಅವರೊಂದಿಗೆ ಆರೋಪಿಗಳು ಜಗಳ ತೆಗೆದಿದ್ದಾರೆ. ಈ ವೇಳೆ ಮಂಜುನಾಥ್ ಅವರು ಪ್ರಶ್ನಿಸಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.\

ಜಗಳ ವಿಕೋಪಕ್ಕೆ ತಿರುಗಿದ್ದು, ಆರೋಪಿ ಪ್ರಜ್ಞೇಶ್ ಎಂಬಾತ ತನ್ನ ಜೇಬಿನಿಂದ ಚಾಕು ತೆಗೆದು ಕೊಲೆ ಮಾಡುವ ಉದ್ದೇಶದಿಂದ ಮಂಜುನಾಥ್ ಅವರ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಇದರಿಂದ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ಈ ಸಂದರ್ಭದಲ್ಲಿ ಬಿಡಿಸಲು ಬಂದ ವರುಣ್ ಮತ್ತು ಲತೀಶ್ ಅವರಿಗೂ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ದೂರುದಾರ ಸಂತೋಷ್ ಮತ್ತು ಇತರರು ಮಧ್ಯಪ್ರವೇಶಿಸಿದಾಗ ಅವರಿಗೆ ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಈರಣ್ಣ ಶಿರಗುಂಪಿ ಅವರು ತನಿಖೆ ಕೈಗೊಂಡು ಪಲಿಮಾರು ನಿವಾಸಿಗಳಾದ ಅಮೃತ್ ಭಂಡಾರಿ (22), ಪ್ರಜ್ಞೇಶ್ (22), ಪುನೀತ್ ಪೂಜಾರಿ (24), ಕಾರ್ಕಳದ ಇನ್ನಾ ಗ್ರಾಮದ ಅಭಿಜಿತ್ (20) ಸೇರಿ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಪ್ರಕರಣದಲ್ಲಿ ಭಾಗಿಯಾದ ಅಪ್ರಾಪ್ತ ಬಾಲಕನನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದರು.
ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಮತ್ತು ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಿಎಸ್‌ಐ ಈರಣ್ಣ ಶಿರಗುಂಪಿ ಅವರ ನೇತೃತ್ವದಲ್ಲಿ ಹೆಡ್ ಕಾನ್ಸ್‌ಟೇಬಲ್ ಆದರ್ಶ್ ಮತ್ತು ಮಲ್ಪೆ ಠಾಣೆಯ ಸಿಬ್ಬಂದಿಗಳು ಆರೋಪಿಗಳ ಪತ್ತೆ ಮತ್ತು ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.