ವರ್ಷಕ್ಕೆ 12 ಋತುಚಕ್ರ ರಜೆ:‌ ಆದೇಶದಲ್ಲಿ ಏನಿದೆ?

ಬೆಂಗಳೂರು: ರಾಜ್ಯದ 18ರಿಂದ 52 ವರ್ಷ ವಯಸ್ಸಿನ ಸರ್ಕಾರಿ ಮಹಿಳಾ ನೌಕರರಿಗೆ ಈಗ ವರ್ಷಕ್ಕೆ 12 ದಿನಗಳ ಋತುಚಕ್ರ ರಜೆ ಪಡೆಯುವ ಮಹತ್ವದ ಸೌಲಭ್ಯವನ್ನು ಸರ್ಕಾರ ಅಧಿಕೃತವಾಗಿ ಜಾರಿಗೆ ತಂದಿದೆ. ತಿಂಗಳಿಗೆ ಒಂದರಂತೆ ವೇತನಸಹಿತ ರಜೆ ದೊರಕುವ ಈ ನಿರ್ಧಾರ ಮಹಿಳಾ ನೌಕರರ ದೈಹಿಕ–ಮನೋಸ್ಥೈರ್ಯ ಕಾಪಾಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ.

ಈ ರಜೆಯನ್ನು ಪಡೆಯಲು ವೈದ್ಯಕೀಯ ಪ್ರಮಾಣ ಪತ್ರದ ಅಗತ್ಯವಿಲ್ಲ. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಪ್ರಾಧಿಕಾರವೇ ಋತುಚಕ್ರ ರಜೆಯನ್ನೂ ಮಂಜೂರು ಮಾಡಬಹುದಾಗಿದೆ. ರಜೆಯನ್ನು ಹಾಜರಾತಿ ದಾಖಲೆಯಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಮತ್ತು ಇದನ್ನು ಇತರೆ ರಜೆಯೊಂದಿಗೆ ಸಂಯೋಜಿಸಲು ಅವಕಾಶವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.

ಸರ್ಕಾರಿ ಕಾಯಂ, ಗುತ್ತಿಗೆ, ವಿವಿಧ ಕಾರ್ಮಿಕ ಕಾಯ್ದೆಗಳ ಅಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ದುಡಿಯುವ ಮಹಿಳಾ ನೌಕರರು, ಹೊರಗುತ್ತಿಗೆ ವಲಯಗಳಲ್ಲಿ ದುಡಿಯುವ ಮಹಿಳಾ ಉದ್ಯೋಗಿಗಳಿಗೂ ಈ ರಜೆ ಸೌಲಭ್ಯ ಅನ್ವಯವಾಗಲಿದೆ

ಇದೇ ವೇಳೆ, ಸರ್ಕಾರಿ ನೌಕರರಿಗಾಗಿ ಜಾರಿಗೊಳಿಸಿರುವ ಈ ಕ್ರಮವನ್ನು ಖಾಸಗಿ ವಲಯಕ್ಕೂ ಅನ್ವಯಿಸಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕೂಡಾ ಸಮಾನ ಪ್ರಮಾಣದ ಕೆಲಸದ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ, ಅವರಿಗೂ ಇದೇ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಕಾರ್ಮಿಕ ಸಂಘಟನೆಗಳು ಹಾಗೂ ಮಹಿಳಾ ಹಕ್ಕುಗಳ ವೇದಿಕೆಗಳು ಆಗ್ರಹಿಸಿವೆ.

error: Content is protected !!