ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಿಚ್ಚು ಹತ್ತಿಕೊಂಡಿರುವ ಬೆನ್ನಲ್ಲೇ, ವಿಶ್ವ ಶಾಂತಿಯ ಪರ ಧ್ವನಿ ಎತ್ತಿದ ಬಾಲಿವುಡ್ ನಟಿ ಮತ್ತು ಖ್ಯಾತ ನೃತ್ಯಗಾರ್ತಿ ನೋರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರಿಗೆ ಗುರಿಯಾಗಿದ್ದಾರೆ. ವಿಶ್ವ ಶಾಂತಿಯ ಬಗ್ಗೆ ಮಾತನಾಡಲು ಹೋದ ನೋರಾ ಅವರಿಗೆ ಟ್ರೋಲಿಗರು ಸರಿಯಾಗಿ ಬೆವರಿಳಿಸಿದ್ದಾರೆ.

ತಮ್ಮನ್ನು ಟ್ರೋಲ್ ಮಾಡಿದವರಿಗೆ ನೋರಾ ಇನ್‌ಸ್ಟಾಗ್ರಾಮ್‌ನಲ್ಲಿ ಉದ್ದನೆಯ ಕ್ಲಾಸ್ ತಗೊಂಡಿದ್ದಾರೆ. “ನಿಮಗೆ ವಿಷಯ ಅರ್ಥ ಮಾಡಿಕೊಳ್ಳುವ ಶಕ್ತಿಯೇ (ಇಲ್ಲ. ಇದನ್ನೆಲ್ಲಾ ನಮಗೆ ಸ್ಕೂಲಿನಲ್ಲಿ ಕಲಿಸಿಕೊಡುತ್ತಿದ್ದರು, ನೀವು ಆ ಕ್ಲಾಸಿಗೆಲ್ಲಾ ಬಂಕ್ ಹಾಕಿದ್ದೀರಾ ಅನಿಸುತ್ತೆ” ಎಂದು ನೋರಾ ಟ್ರೋಲಿಗರನ್ನು ಕಿಚಾಯಿಸಿದ್ದಾರೆ. ಮೊಬೈಲ್ ನೋಡಿಕೊಂಡು ಬುದ್ಧಿ ಮಂದವಾಗಿದೆ, ಸ್ವಲ್ಪ ಮೆದುಳಿಗೆ ಕೆಲಸ ಕೊಡಿ ಎಂದು ಚಾಟಿ ಬೀಸಿದ್ದಾರೆ.

“ನಾನು ಎಲ್ಲರೂ ನೆಮ್ಮದಿಯಾಗಿರಿ, ಜಗಳ ಆಡಬೇಡಿ ಎಂದು ಹೇಳಿದರೆ ಜನರಿಗೆ ಯಾಕೆ ಉರಿಯುತ್ತದೆಯೋ ಗೊತ್ತಿಲ್ಲ. ನಿಮಗೆ ಶಾಂತಿ ಎಂಬ ಪದ ಕೇಳಿದರೆ ಅಲರ್ಜಿ ಆಗುತ್ತಿದ್ದರೆ, ದಯವಿಟ್ಟು ಡಾಕ್ಟರ್ ಹತ್ತಿರ ಹೋಗಿ ಚೆಕ್ ಮಾಡಿಸಿಕೊಳ್ಳಿ” ಎಂದು ನೋರಾ ಉಚಿತ ಸಲಹೆ ನೀಡಿದ್ದಾರೆ. “ನಾನು ಉಪವಾಸ ಮುಗಿಸಿ ಶಾಂತಿಗಾಗಿ ಪ್ರಾರ್ಥನೆ ಮಾಡ್ತಾ ಇದ್ದರೆ, ಇಲ್ಲಿ ಜನ ಕೋಪ ಮಾಡ್ಕೊಳ್ತಾರೆ, ಇದು ನೋಡಿ ವಿಪರ್ಯಾಸ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನೋರಾ ದುಬೈನಲ್ಲಿ ಯುದ್ಧದ ನಡುವೆ ಸಿಲುಕಿದ್ದಾರೆ, ಏರ್ಪೋರ್ಟ್‌ನಲ್ಲಿ ಪರದಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿಗೂ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. “ನಾನು ಆರಾಮಾಗಿ ಇಂಡಿಯಾದಲ್ಲೇ ಇದ್ದೀನಿ, ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ” ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
