ಲಖನೌ: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡಗಳು ಕವಿದು, ರಕ್ತಪಾತದ ಸುದ್ದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಬಾರಾಬಂಕಿಯಿಂದ ಶಾಂತಿ ಮತ್ತು ಸಹೋದರತ್ವದ ಅದ್ಭುತ ಸಂದೇಶವೊಂದು ರವಾನೆಯಾಗಿದೆ. ದೇಶಾದ್ಯಂತ ಇಂದು ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಪ್ರಸಿದ್ಧ ದೇವ ಶರೀಫ್ ದರ್ಗಾದಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಬಣ್ಣ ಎರಚಿಕೊಳ್ಳುವ ಮೂಲಕ ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಲಖನೌನಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿರುವ ಈ ಸೂಫಿ ಸಂತ ವಾರಿಸ್ ಅಲಿ ಶಾ ಅವರ ದರ್ಗಾವು ಶತಮಾನಗಳಿಂದಲೂ ಭಾವೈಕ್ಯತೆಯ ಕೇಂದ್ರವಾಗಿದೆ. ಈ ವರ್ಷವೂ ಮಾರ್ಚ್ 4ರಂದು ಸಾವಿರಾರು ಭಕ್ತರು ಜಾತಿ-ಮತದ ಭೇದ ಮರೆತು ಹಳದಿ ಬಣ್ಣದ ಗುಲಾಲ್ ಹಚ್ಚಿ ಸಂಭ್ರಮಿಸಿದ್ದಾರೆ. ವಿಶೇಷವೆಂದರೆ, ವಾರಿಸ್ ಅಲಿ ಶಾ ಅವರಿಗೆ ಹಳದಿ ಬಣ್ಣ ಅತ್ಯಂತ ಪ್ರಿಯವಾದುದರಿಂದ, ಇಲ್ಲಿನ ಹೋಳಿಯಲ್ಲಿ ಹಳದಿ ಬಣ್ಣಕ್ಕೇ ಅಗ್ರಸ್ಥಾನ!

ಈ ಅಪರೂಪದ ಸಂಭ್ರಮದ ವೀಡಿಯೊ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಕೇವಲ ಎರಡು ದಿನಗಳಲ್ಲಿ 12 ಲಕ್ಷಕ್ಕೂ ಅಧಿಕ ಜನ ಈ ವೀಡಿಯೊ ವೀಕ್ಷಿಸಿದ್ದು, ನೆಟ್ಟಿಗರು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸಹೋದರತ್ವ ಚಿರಾಯುವಾಗಲಿ” ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, “ಪ್ರೀತಿಗಿಂತ ಮಿಗಿಲಾದ ಧರ್ಮ ಯಾವುದೂ ಇಲ್ಲ” ಎಂದು ಮತ್ತೊಬ್ಬರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
1917ರಲ್ಲಿ ನಿರ್ಮಿಸಲಾದ ಈ ದರ್ಗಾವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಭಾರತದ ಸಂಸ್ಕೃತಿಯ ಪ್ರತಿಬಿಂಬ. ಒಂದು ಕಡೆ ಗಡಿಯಲ್ಲಿ ಕ್ಷಿಪಣಿಗಳ ಆರ್ಭಟ ಕೇಳುತ್ತಿದ್ದರೆ, ಮತ್ತೊಂದೆಡೆ ಬಾರಾಬಂಕಿಯ ಈ ದರ್ಗಾದಲ್ಲಿ ಪ್ರೀತಿಯ ಬಣ್ಣಗಳ ಆರ್ಭಟ ಕೇಳುತ್ತಿದೆ. ಇದು ನೈಜ ಭಾರತದ ಚಿತ್ರಣ!
