ಡಿ.7: ವಿಶೇಷ ಚೇತನ ಮಕ್ಕಳೊಂದಿಗೆ ‘ಸಾಂತ್ವಾನ ಸಂಚಾರʼ: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಸ್ಥೆಯ ಮಾನವೀಯ ಹೆಜ್ಜೆ

ಮಂಗಳೂರು: ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಸರಾಗಿರುವ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆ ಈ ಬಾರಿ ವಿಶೇಷ ಚೇತನ ಮಕ್ಕಳಿಗಾಗಿ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಆಯೋಜಿಸಿದೆ. ‘ಸಾಂತ್ವಾನ ಸಂಚಾರ 3.0 – A Day with Special Kids’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಕಾರ್ಯಕ್ರಮ ಡಿಸೆಂಬರ್ 7 ರಂದು ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಜರುಗಲಿದೆ.

ಸಂಸ್ಥೆಯ ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ಪಂಪ್‌ವೆಲ್ ಬಳಿ‌ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಹಾಸಿಗೆಪೀಡಿತರ ಹಾಗೂ ಅನಾಥ ಮಕ್ಕಳ ಜೊತೆ ಸಂಚಾರ ನಡೆಸಿದ ಅನುಭವವನ್ನು ಹಂಚಿಕೊಂಡರು. “ಈ ಬಾರಿ ನಾವು 100 ವಿಶೇಷ ಚೇತನ ಮಕ್ಕಳಿಗೆ ಒಂದೂ ದಿನದ ಸಂತೋಷ, ಆಟ-ಪಾಠ ಹಾಗೂ ಹೊಸ ಅನುಭವಗಳನ್ನು ನೀಡಲು ಸಜ್ಜಾಗಿದ್ದೇವೆ,” ಎಂದು ಅವರು ಹೇಳಿದರು.

ಸಂಚಾರದ ವೈಶಿಷ್ಟ್ಯಗಳ ಬಗ್ಗೆ ವಿವರಿಸಿದ ಶರೀಫ್‌ ಅಬ್ಬಾಸ್‌, ಮಕ್ಕಳಿಗೆ ಇಬ್ಬರಿಗೆ ಒಬ್ಬರಂತೆ 50 ಕೇರ್‌ಟೇಕರ್‌ಗಳು, ಜೊತೆಗೆ 60 ಮಂದಿ : ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(CFM) ಸ್ವಯಂಸೇವಕರು ಸಹಕರಿಸಲಿದ್ದಾರೆ. ತುರ್ತು ಪರಿಸ್ಥಿತಿಗೆ ಎರಡು ಅಂಬುಲೆನ್ಸ್, ಇಬ್ಬರು ವೈದ್ಯರು ಮತ್ತು ಒಬ್ಬ ಫಿಸಿಯೋಥೆರಪಿಸ್ಟ್ ಸಿದ್ಧರಾಗಿರುವರು ಎಂದರು.

ಬೆಳಗ್ಗೆ 8.30ಕ್ಕೆ ಹೋಟೆಲ್ BMS ನಲ್ಲಿ ಉಪಹಾರ ಮತ್ತು ವೈಭವೋಪೇತ ಸ್ವಾಗತದೊಂದಿಗೆ ಸಂಚಾರ ಆರಂಭಗೊಳ್ಳಲಿದೆ. ಬ್ಯಾಂಡ್ ಸೆಟ್ ಪ್ರದರ್ಶನ, ಬಿಗ್ ಡಾಲ್ಸ್ ಪೆರೇಡ್ ಹಾಗು ಸನ್‌ಗ್ಲಾಸ್–ಕ್ಯಾಪ್ ವಿತರಣೆ ಮಕ್ಕಳಿಗೆ ಹೆಚ್ಚುವರಿ ಉತ್ಸಾಹ ತುಂಬಲಿವೆ. ಮಧ್ಯಾಹ್ನದ ವೇಳೆಗೆ ಪಿಲಿಕುಳ ನಿಸರ್ಗಧಾಮ, ಪಾಲೇಮಾರ್ ಗಾರ್ಡನ್, ಸ್ವಿಮ್ಮಿಂಗ್ ಪೂಲ್ ಚಟುವಟಿಕೆ, ಆಟಗಳು, ಸ್ಪರ್ಧೆಗಳು, ಲೈವ್ ಪಿಜ್ಜಾ ಕೌಂಟರ್, ಪಾಪ್‌ಕಾರ್ನ್–ಸಿಹಿಕೋಳಿ, ವಾಟರ್‌ ಬ್ಯಾಲೂನ್ ಫನ್, ಚಿತ್ರಕಲೆ ಜೋನ್, ಸೆಲ್ಫಿ ಕೌಂಟರ್—ಇವೆಲ್ಲವು ಮಕ್ಕಳಿಗೆ ದಿನವಿಡೀ ಸಂಭ್ರಮ ನೀಡಲಿವೆ. ಸಂಜೆ 6.30ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಅವರು ಸಂಸ್ಥೆಯ ಪರಿಚಯ ನೀಡುತ್ತಾ, 2017ರಲ್ಲಿ ಮೂವರು ಸ್ನೇಹಿತರಿಂದ ಆರಂಭವಾದ ಚಿಕ್ಕ ವಾಟ್ಸಪ್ ಗ್ರೂಪ್ ಇಂದು ನೋಂದಾಯಿತ ಟ್ರಸ್ಟ್ ಆಗಿ ಬೆಳೆದಿದ್ದು, ಈಗ 80ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸ್ಥಾಪಕ ಸಿರಾಜುದ್ದೀನ್ ಪರ್ಲಡ್ಕ ಹಾಗೂ ಅಧ್ಯಕ್ಷ ಶರೀಫ್ ಅಬ್ಬಾಸ್ ಉಳ್ಳಾಲ್ ನೇತೃತ್ವದಲ್ಲಿ ಸಂಸ್ಥೆ ಹಲವು ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು.

ಗ್ರೂಪ್‌ನ ಒಂದು ವಿಚಿತ್ರ ಹಾಗೂ ಸೈದ್ದಾಂತಿಕ ನಿಯಮವೆಂದರೆ — ಯಾರಾದರೂ ತಪ್ಪಾಗಿ ಮೆಸೇಜ್ ಡಿಲೀಟ್ ಮಾಡಿದರೆ ₹100 ದಂಡ. ಈ ಹಣ ಸಂಪೂರ್ಣವಾಗಿ ಬಡವರಿಗೆ ಸಹಾಯಕ್ಕಾಗಿ ಬಳಸಲಾಗುತ್ತದೆ. ರಕ್ತದಾನ, ಮೆಡಿಕಲ್ ಬೆಡ್, ವೀಲ್ಚೇರ್ ವಿತರಣೆ ಸೇರಿದಂತೆ ಹಲವು ಮೌನಸೇವೆಗಳು ಸಂಸ್ಥೆಯ ವಿಶೇಷತೆ. CFM ಸಂಸ್ಥೆಯ ಸಾಮಾಜಿಕ ಚಟುವಟಿಗಳು ಮುಂದುವರಿಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಒಟ್ಟು ಸಂಚಾಲಕ ಅಸ್ತಾಬ್ ಬಸ್ತಿಕಾರ್, ಸಹ ಕಾರ್ಯದರ್ಶಿ ಜುನೈದ್ ಬಂಟ್ವಾಳ್ ಉಪಸ್ಥಿತರಿದ್ದರು.

error: Content is protected !!