ರಾಜ್ಯದಲ್ಲಿ ಭ್ರಷ್ಟಾಚಾರ ಶೇ.63ರಕ್ಕೆ ಏರಿಕೆ- ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ!

ಬೆಂಗಳೂರು: ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಗಂಭೀರ ಹಂತ ತಲುಪಿದ್ದು, ಕರ್ನಾಟಕದಲ್ಲಿ ಭ್ರಷ್ಟಾಚಾರದ ಪ್ರಮಾಣ ಶೇ. 63ಕ್ಕೆ ಏರಿಕೆಯಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೀಡಿರುವ ಹೇಳಿಕೆ ಬಿಜೆಪಿಗೆ ಒಂದು ಅಸ್ತ್ರವಾಗಿ ಪರಿಣಮಿಸಿದೆ. “ಉಪಲೋಕಾಯುಕ್ತರೂ ಸರ್ಕಾರದ ಕಾರ್ಯಪದ್ಧತಿಗೆ ಸರ್ಟಿಫಿಕೇಟ್ ನೀಡಿದ್ದಾರೆ” ಎಂದು ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ: ಉಪಲೋಕಾಯುಕ್ತರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್​​ ಮೇಲೆ ಮುಗಿಬಿದ್ದ ಬಿಜೆಪಿ

ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ, “ಕೇರಳದಲ್ಲಿ ಕೇವಲ ಶೇ.10ರಷ್ಟು ಭ್ರಷ್ಟಾಚಾರ ಇದ್ದಾಗ, ಕರ್ನಾಟಕದಲ್ಲಿ ಈ ಪಿಡುಗು ವಿಪರೀತ ಹೆಚ್ಚುತ್ತಿದೆ. ತಕ್ಷಣ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯಕ್ಕೆ ಮಾರಕ” ಎಂದು ಎಚ್ಚರಿಸಿದರು.

ಸ್ವತಃ ಉಪಲೋಕಾಯುಕ್ತರ ಈ ರೀತಿ ಮಾಡಿದ ಟೀಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಗುರಿಯಾಗಿಸಿದೆ. ಎಕ್ಸ್‌ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಕಮಿಷನ್‌ ಸರ್ಕಾರ ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಸ್ವತಃ ಭ್ರಷ್ಟಾಚಾರದ ಕೆಸರುಗದ್ದೆಯಲ್ಲಿ ಮುಳುಗಿದೆ” ಎಂದು ಟೀಕಿಸಿದರು. ಶೇ.63ರಷ್ಟು ಭ್ರಷ್ಟಾಚಾರದ ಹೇಳಿಕೆಯ ಮೂಲಕ “ಉಪಲೋಕಾಯುಕ್ತರೂ ಸರ್ಕಾರದ ಕಾರ್ಯಪದ್ಧತಿಗೆ ಸರ್ಟಿಫಿಕೇಟ್ ನೀಡಿದ್ದಾರೆ” ಎಂದು ವ್ಯಂಗ್ಯವಾಡಿದರು.

Ashok Tweet

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಅವರು ಪ್ರಶ್ನಿಸಿ, “ಇಂದು ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ 36 ಸೀಟೂ ಬರುವುದಿಲ್ಲ” ಎಂದು ಮತ್ತಷ್ಟು ಕಿಡಿಕಾರಿದರು.

ಕಳೆದ ಸರ್ಕಾರದ ಮೇಲೆ ಕಾಂಗ್ರೆಸ್ ಮಾಡಿದ ಶೇ.40 ಕಮಿಷನ್ ಆರೋಪದ ನೆನಪಿನಲ್ಲೇ, ಇದೇ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮೇಲೆ ಈಗ ಎದುರು ದಾಳಿ ಜೋರಾಗಿದೆ. ಉಪಲೋಕಾಯುಕ್ತರ ಪ್ರಕಟಣೆ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಡುವುದು ನಿಶ್ಚಿತ.

error: Content is protected !!