ಮಂಗಳೂರು: ಉಳ್ಳಾಲದ ಮಂಜನಾಡಿ ಉರುಮಣೆ ಮಡಪ್ಪಾಡಿಯಲ್ಲಿ ಮೇ 30ರಂದು ಸಂಭವಿಸಿದ ಗುಡ್ಡ ಕುಸಿತದಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರು ಸೋಮವಾರ (ನ.17) ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರನ್ನು ಭೇಟಿಯಾಗಿ ತಮ್ಮ ಮುಂದಿನ ಜೀವನಕ್ಕಾಗಿ ಉದ್ಯೋಗ, ಕೃತಕ ಕಾಲು ಮತ್ತು ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.

ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಸಮಿತಿ ಸುಳ್ಳು ವರದಿ ಸಲ್ಲಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಶ್ವಿನಿ ಅವರು ಆರೋಪಿಸಿದ್ದಾರೆ. ಘಟನೆಗೆ ಆರು ತಿಂಗಳು ಕಳೆದರೂ ಪರಿಹಾರ ದೊರಕದಿರುವುದರ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ದರ್ಶನ್ ಅವರು ಈ ಮನವಿಗೆ ಪ್ರತಿಕ್ರಿಯಿಸಿ, ಭೂಕುಸಿತ ಪ್ರಕರಣಗಳಲ್ಲಿ ಇಲಾಖೆಯ ಎಂಜಿನಿಯರ್‌ಗಳ ವರದಿಯ ಜೊತೆಗೆ ಖಾಸಗಿ ವರದಿಯನ್ನು ಸಹ ಪಡೆಯಲಾಗುವುದು ಎಂದು ತಿಳಿಸಿದರು. ಈ ಪ್ರಕರಣದಲ್ಲಿ ರಚಿಸಲಾದ ಇನ್ನೊಂದು ಸಮಿತಿಯ ತಜ್ಞರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಪರಿಹಾರ, ಆಸ್ಪತ್ರೆ ವೆಚ್ಚ, ಅಂಗವಿಕಲ ಪರಿಹಾರ ಮತ್ತು ಮನೆ ನಿರ್ಮಾಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಮಾನವೀಯ ದೃಷ್ಟಿಯಿಂದ ಹೆಚ್ಚಿನ ಪರಿಹಾರ ನೀಡಲು ಕ್ರಮ ಜಿಲ್ಲಾಡಳಿತ ತೆಗೆದುಕೊಳ್ಳಲಿದೆ ಎಂದರು. ಅಗತ್ಯವಿದ್ದಲ್ಲಿ ಸ್ವತಃ ಸ್ಥಳಕ್ಕೆ ಭೇಟಿ ನೀಡುವುದಾಗಿಯೂ, ವರದಿ ತಪ್ಪಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು.

ಈ ದುರಂತಕ್ಕೆ ಮನೆಯ ಮೇಲ್ಭಾಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ರಸ್ತೆಯೇ ಕಾರಣ ಎಂದು ಸ್ಥಳೀಯರು ತಿಳಿಸುತ್ತಾರೆ. ಮನೆಯಿಂದ ಕೇವಲ 5 ಮೀಟರ್ ದೂರದಲ್ಲಿ ಜೆಸಿಬಿ ಯಂತ್ರದಿಂದ ಅಗೆಯುವಿಕೆಯಿಂದ ಉಂಟಾದ ಒತ್ತಡದಿಂದ ಮಣ್ಣು ಕುಸಿದು ಮನೆಯ ಮೇಲೆ ಬಿದ್ದಿದೆ. ಆದರೆ, ಪಂಚಾಯತ್ ಅಧಿಕಾರಿಗಳು ಈ ಕಾರಣವನ್ನು ತಿರುಚಿ ಪ್ರಸ್ತುತಿಸಿದ್ದಾರೆ ಮತ್ತು 5 ವರ್ಷ ಹಿಂದೆ ಕಟ್ಟಿದ ಮನೆಯನ್ನು 80 ವರ್ಷದ ಹಿಂದೆ ಕಟ್ಟಿದಂತೆ ಸುಳ್ಳು ವರದಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಎಂಜಿನಿಯರ್ ಕೂಡ ಜೆಸಿಬಿ ಬಳಸದೆ ಕೈಯಿಂದ ಅಗೆದು ರಸ್ತೆ ನಿರ್ಮಿಸಿದಂತೆ ಸುಳ್ಳು ವರದಿ ನೀಡಿದ್ದಾರೆ ಎಂದು ಆರೋಪವಿದೆ.
ಸ್ಥಳೀಯರಾದ ಜಗದೀಶ್ ಅವರು, ಅಶ್ವಿನಿ ಅವರಿಗೆ ಪರಿಹಾರ ದೊರಕಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಶ್ವಿನಿ ಅವರ ಸೋದರ ತೇಜಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.