ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತಿಟ್ಟಿರುವ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ವಿರುದ್ಧವೇ ದೂರು ದಾಖಲಾಗಿರುವ ಘಟನೆ ಗಮನ ಸೆಳೆದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಿಸಲಾಗಿದೆ.

ಸೌಜನ್ಯ ಪರ ಹೋರಾಟಗಾರ ಟಿ. ಜಯಂತ್ ಅವರು ಎಸ್ಐಟಿ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದು, ತನಿಖಾ ತಂಡದ ಸದಸ್ಯರಾದ ಜಿತೇಂದ್ರ ದಯಾಮ, ಎಸ್.ಪಿ. ಸೈಮನ್, ಡಿವೈಎಸ್ಪಿ ಆರ್.ಜಿ. ಮಂಜುನಾಥ, ಇನ್ಸ್‌ಪೆಕ್ಟರ್ ಮಂಜುನಾಥ ಗೌಡ, ಸಬ್–ಇನ್ಸ್‌ಪೆಕ್ಟರ್ ಗುಣಪಾಲ್ ಇವರನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ.
ದೂರು ಪ್ರಕಾರ, ವಿಚಾರಣೆ ವೇಳೆ ದೈಹಿಕ ಹಲ್ಲೆ, ಪ್ರಾಣ ಬೆದರಿಕೆ, ಅಪರಾಧಿಕ ಪಿತೂರಿ, ಸುಳ್ಳು ಸಾಕ್ಷಿ ನೀಡುವಂತೆ ಬಲವಂತ, ಕಾನೂನುಬಾಹಿರ ಕೃತ್ಯಗಳು ಹಾಗೂ ಸರಕಾರಿ ಆದೇಶ ಪಾಲನೆ ಮಾಡದೆ ಕರ್ತವ್ಯ ನಿರ್ಲಕ್ಷ್ಯ ನಡೆಸಲಾಗಿದೆ ಎಂದು ಜಯಂತ್ ಆರೋಪಿಸಿದ್ದಾರೆ.

ಈ ದೂರು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯಬಹುದು ಎಂಬುದರ ಬಗ್ಗೆ ಸ್ಥಳೀಯ ವಲಯದಲ್ಲಿ ಕುತೂಹಲ ಮೂಡಿದೆ.