ಭಾವನಗರ (ಗುಜರಾತ್) – ಮದುವೆಗೆ ಕೇವಲ ಒಂದು ಗಂಟೆ ಬಾಕಿಯಿದ್ದಾಗಲೇ, ಆತನ ಭಾವೀ ಪತ್ನಿಯಾಗಬೇಕಿದ್ದ ಯುವತಿ ಶವವಾಗಿ ಪತ್ತೆಯಾದ ಘಟನೆ ಭಾವನಗರದ ಟೆಕ್ರಿ ಚೌಕ್ ಬಳಿ ಶನಿವಾರ ಸಂಭವಿಸಿದೆ. ನಿಶ್ಚಿತಾರ್ಥವಾಗಿದ್ದ ಪತಿ ಸಜನ್ ಬರಯ್ಯ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.

ಪೊಲೀಸರ ಪ್ರಕಾರ, ಸಜನ್ ಮತ್ತು ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಕುಟುಂಬದ ವಿರೋಧದ ಮಧ್ಯೆಯೂ ಇವರ ನಿಶ್ಚಿತಾರ್ಥ ಹಾಗೂ ಮದುವೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಮದುವೆ ಶನಿವಾರ ರಾತ್ರಿ ನಡೆಯಬೇಕಿತ್ತು.

ಮದುವೆಗೆ ಗಂಟೆ ಮುಂಚೆ ಸೀರೆ ಮತ್ತು ಹಣದ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳದ ವೇಳೆ ಸಜನ್ ಕಬ್ಬಿಣದ ಪೈಪ್‌ನಿಂದ ಸೋನಿಗೆ ಹೊಡೆದು, ನಂತರ ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಇದರಿಂದ ಸೋನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯ ನಂತರ ಆರೋಪಿ ಮನೆಯನ್ನು ಭಾಗಶಃ ಹಾನಿಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಉಪ ಪೊಲೀಸ್ ವರಿಷ್ಟಾಧಿಕಾರಿ ಆರ್.ಆರ್. ಸಿಂಘಾಲ್ ಪ್ರಕಾರ, “ಸೀರೆ ಮತ್ತು ಹಣದ ವಿಷಯಕ್ಕೆ ಜಗಳವಾಗಿದ್ದು, ಸಜನ್ ಕಬ್ಬಿಣದ ಪೈಪ್‌ನಿಂದ ಹೊಡೆದಿದ್ದಾನೆ. ಸೋನಿಯ ತಲೆಯನ್ನು ಗೋಡೆಗೆ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.” ಎಂದಿದ್ದಾರೆ.
ಸೋನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂಲಗಳ ಪ್ರಕಾರ, ಸಜನ್ ಶನಿವಾರ ನೆರೆಹೊರೆಯವರೊಡನೆ ಜಗಳವಾಡಿದ್ದಾನೆ. ಆ ಜಗಳಕ್ಕೂ ಒಂದು ದೂರು, ಮತ್ತು ಈ ಕೊಲೆ ಪ್ರಕರಣಕ್ಕೂ ಪ್ರತ್ಯೇಕ FIR ದಾಖಲಾಗಿದೆ. ಪೊಲೀಸರು ಆರೋಪಿ ಹುಡುಕುವ ಕಾರ್ಯವನ್ನು ಆರಂಭಿಸಿದ್ದಾರೆ.